ಜಿಲ್ಲೆ

ದೆಹಲಿ ಗಲಭೆಗೆ ಬಿಜೆಪಿ ಕಾರಣ ಎಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

Ramanagara

ರಾಮನಗರ: ದೆಹಲಿ ಗಲಭೆ ಬಿಜೆಪಿ ನಾಯಕರಿಂದಲೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬಿಡದಿಯ ತೋಟದ ಮನೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೆಡೆ ದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕರೆತಂದು ಗುಜರಾತ್‌ನಲ್ಲಿ ಮೆರವಣಿಗೆ ಮಾಡುತ್ತಾರೆ. ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯೂ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದು ಟೀಕಿಸಿದರು. ಇದರಿಂದ ದೇಶದ ಬಗ್ಗೆ ಅವರಿಗೆ ಯಾವ ಮಟ್ಟದ ಗೌರವ ಬರಬಹುದು. ಇದನ್ನು ಬಿಜೆಪಿ ನಾಯಕರು ಮತ್ತು ಈ ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾರತ ಹಿಂದು ರಾಷ್ಟ್ರ. ಬಿಜೆಪಿಯವರು ಹೊಸದಾಗಿ ಹಿಂದು ರಾಷ್ಟ್ರ ಎಂದು ೋಷಿಸುವ ಅಗತ್ಯವಿಲ್ಲ. ಆದರೆ, ಹಿಂದು ರಾಷ್ಟ್ರದ ಹೆಸರಲ್ಲಿ ಮತ್ತು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ. ಕಾಲಚಕ್ರ ಬದಲಾದಂತೆ ಜನ ಅರ್ಥ ಮಾಡಿಕೊಳ್ತಾರೆ ಎಂದು ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ಗಲಭೆ ನಡೆದು ಅಮಾಯಕರು ಬಲಿಯಾದರು. ಈ ಬಗ್ಗೆ ನ್ಯಾಯಾಧೀಶರು ಕೇಂದ್ರದ ವಿರುದ್ಧ ಪ್ರತಿಕ್ರಿಯೆ ನೀಡಿದ್ದರು. ಅದಕ್ಕಾಗಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ದೇಶದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದ್ದು, ಇಂದು ದೇಶದಲ್ಲಿ ನಡೆಯುತ್ತಿರುವುದೇ ಇದು ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್ ಹೇಳಿಕೆ ಪರಿಗಣಿಸಬೇಕಾಗಿಲ್ಲ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಹೋರಾಟ ಮಾಡುತ್ತಿದ್ದಾಗ ಬಸವರಾಜ್ ಪಾಟೀಲ್ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು. ಯತ್ನಾಳ್ ಅವರು ಈ ಹಿಂದೆ ತಮ್ಮದೇ ಪಕ್ಷದ ಮುಖ್ಯಮಂತ್ರಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ನೋಡಿದಾಗ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಆದರೆ ದೊರೆಸ್ವಾಮಿ ಯವರ ಹೋರಾಟದ ಬೆಲೆ ಈ ಮನುಷ್ಯನಿಗೆ ಹೇಗೆ ಗೊತ್ತಿರಲು ಸಾಧ್ಯ ಎಂದರು. ಅಲ್ಲದೆ, ಯಾವುದೋ ತಿಲಕ ಇಟ್ಕೊಂಡು ಬಂದು ಆಟ ಆಡುತ್ತಾ ಇದ್ದಾರೆ, ಆಡಲಿ ಮುಂದೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಕೆ.ಆರ್.ಪೇಟೆ ಶಾಸಕರ ಬಗ್ಗೆ ಜನ ತೀರ್ಮಾನಿಸ್ತಾರೆ: ಕೆ.ಆರ್.ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈ ಎಂದಿರುವ ಬಗ್ಗೆ ಮಂಡ್ಯ ಜಿಲ್ಲೆಯ ಜನ ತೀರ್ಮಾನ ಮಾಡುತ್ತಾರೆ. ಮಂಡ್ಯ ಜಿಲ್ಲೆ ತಾಕತ್ತಿನ ಬಗ್ಗೆ ಹೇಳಿದ್ರೆ ಒಪ್ಪಬಹುದಿತ್ತು. ಮಹಾರಾಷ್ಟ್ರ, ಶಿವಾಜಿಗೆ ಜೈಕಾರ ಹಾಕಿರುವ ನಾರಾಯಣಗೌಡ, ಮಂಡ್ಯ ಮತ್ತು ಕೆ.ಆರ್.ಪೇಟೆ ಜನರನ್ನು ಮರೆತಿದ್ದಾರೆ. ಮಹಾರಾಷ್ಟ್ರ ತಾಕತ್ತು ದೊಡ್ಡದೋ, ಮಂಡ್ಯ ತಾಕತ್ತು ದೊಡ್ಡದೋ ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.