ಜಿಲ್ಲೆ

ಬಿಜೆಪಿ, ಕಾಂಗ್ರೆಸ್ ಆಟ ನೋಡಿದ್ದೀನಿ ; ಮೇಕೆದಾಟು ಪಾದಯಾತ್ರೆ ಉದ್ದೇಶ ಗೊತ್ತಿದೆ ; ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

Tumakuru

ತುರುವೇಕೆರೆ : ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಆಟಗಳನ್ನು ನೋಡಿದ್ದೇನೆ. ರಾಜ್ಯಕ್ಕೆ ನೀಡಿರುವ ಕೊಡುಗೆ ಯೋಜನೆಗಳ ಬಗ್ಗೆ ಎಲ್ಲವೂ ಗೊತ್ತಿದೆ. ಮೇಕೆದಾಟು ಯೋಜನೆಯ ಪಾದಯಾತ್ರೆಯಲ್ಲಿ ಯಾರು ಭಾಗವಹಿಸಿದ್ದರು, ಪಾದಯಾತ್ರೆಯ ಉದ್ದೇಶ ಏನು ಎಂಬುದೂ ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ದೆಬ್ಬೇಘಟ್ಟ ಹೋಬಳಿ ಗುರುವಿನ ಮಠ ಗ್ರಾಮದಲ್ಲಿ ಭಾನುವಾರ ಸೋಮೇಶ್ವರ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1983ರಲ್ಲಿ ನೀರಾವರಿ ಮಂತ್ರಿಯಾಗಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೆಚ್ಚು ಜಾರಿ ಮಾಡಿದ್ದು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಈ ದೇವೇಗೌಡ ಕಾರಣ. ರಾಜ್ಯವನ್ನು ಉಳಿಸಲು ಜೆಡಿಎಸ್ ಸಂಪೂರ್ಣ ಅಧಿಕಾರಕ್ಕೆ ಬೇರಬೇಕಿದೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬುಡಬುಡಕಿ ಹೋರಾಟ. ಇದರಿಂದ ಏನೂ ಆಗಲ್ಲ. ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಏನನ್ನೂ ಮಾಡುವುದಿಲ್ಲ, ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ. ರಾಜ್ಯದ ರೈತರು ಉಳಿದಿರುವುದು ದೇವೇಗೌಡರ ಹೋರಾಟದಿಂದ ಮಾತ್ರ. ಅವರಿಂದಲೇ ನಮ್ಮ ತಾಲೂಕಿಗೆ ಹೇಮಾವತಿ ಹರಿಯತ್ತಿದೆ. ದೆಬ್ಬೇಘಟ್ಟ ಹೋಬಳಿ ಮೇಲೆ ದೇವೇಗೌಡರಿಗೆ ಅಪಾರ ಪ್ರೀತಿ. ಆರೋಗ್ಯ ಸರಿ ಇಲ್ಲದಿದ್ದರೂ ನಿಮ್ಮ ಮೇಲಿನ ಅಭಿಮಾನಕ್ಕೆ ಆಗಮಿಸಿದ್ದಾರೆ ಎಂದರು.

ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಮಾತನಾಡಿ, ದೇವೇಗೌಡರ ಜತೆಯಲ್ಲಿ ಇದ್ದವನು ನಾನು. ಸಣ್ಣ ತಪ್ಪಿನಿಂದ ಇಲ್ಲೇ ಇರುವಂತಾಗಿದೆ. ಅವರ ಮಾತು ಕೇಳಿದ್ದರೆ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತಿದ್ದೆ. ಇಂದು ಪಶ್ಚಾತ್ತಾಪ ಪಡುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿರುವ ನಾಯಕರು ಜೆಡಿಎಸ್ ಪ್ರಾಡಕ್ಟ್‌ಗಳು. ರಾಜ್ಯದ ರೈತರ ಹಿತಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ದೇವೇಗೌಡರು ಮಾತ್ರ ಎಂದರು.

ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ನಾಗಮಂಗಲ ಶಾಸಕ ಸುರೇಶ್‌ಗೌಡ ಮಾತನಾಡಿದರು. ಎಪಿಎಂಸಿ ಸದಸ್ಯ ವಿಜಿಕುಮಾರ್, ಮುಖಂಡರಾದ ದೊಡ್ಡಾಘಟ್ಟಚಂದ್ರೇಶ್, ಎಚ್.ಟಿ.ಕೃಷ್ಣೇಗೌಡ, ಕಡೇಹಳ್ಳಿ ಸಿದ್ದೇಗೌಡ, ಎ.ಬಿ.ಜಗದೀಶ್, ಗೌರೀಶ್ ಇದ್ದರು.

ನನ್ನ ಕೊನೆಯ ಹೋರಾಟ : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ನನ್ನ ಕೊನೆಯ ಹೋರಾಟ ಮಾಡುತ್ತೇನೆ. ಪ್ರಾದೇಶಿಕ ಪಕ್ಷಗಳ ಶಕ್ತಿ ನಿಮಗೆ ತಿಳಿದಿಲ್ಲ. ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಕೇಂದ್ರ ಸರ್ಕಾರ ಅವರ ಹತ್ತಿರ ಮಂಡಿಯೂರುತ್ತದೆ. ಕರ್ನಾಟಕದಲ್ಲಿ ಜೆಡಿಎಸ್‌ಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡುತ್ತಿಲ್ಲ ಏಕೆ ? ದೇವೇಗೌಡ ಏನು ತಪ್ಪು ಮಾಡಿದ್ದಾನೆ ಎಂದು ಪ್ರಶ್ನಿಸಿದರು.

ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಸಂಚರಿಸಿ ಜನರಿಗೆ ಕೈ ಮುಗಿದು ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಲಾಗುವುದು ಎಂದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 16 ವರ್ಷ ಪ್ರಧಾನಿಯಾಗಿದ್ದರೂ ಹಿಂದುಳಿದ ವರ್ಗದವರಿಗೆ ರಾಜಕೀಯ ಶಕ್ತಿ ತುಂಬಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜಕೀಯದಲ್ಲಿ ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದ್ದೆ. ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಮೀಸಲಾತಿ ಜತೆಗೆ ಹಿಂದುಳಿದವರ್ಗ, ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ಕೊಟ್ಟಿದ್ದೆ. ಪ್ರಧಾನಿಯಾದ 20 ತಿಂಗಳಿನಲ್ಲಿಯೇ ನಮ್ಮವರೇ ಪಿತೂರಿ ಮಾಡಿ ಕೆಳಗಿಳಿಸಿದರು ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.