ಜಿಲ್ಲೆ

ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ಡಿಸಿಎಂ ಡಿ.ಕೆ. ಶಿವಕುಮಾರ್ ಸೊಕ್ಕು ಮುರಿಯಲು ಚನ್ನಪಟ್ಟಣದ ಜನತೆ ನಿಖಿಲ್ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ಎನ್‌ಡಿಎ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಅವರು ಭವಿಷ್ಯ ಹೇಳಿಲ್ಲ, ವಾಸ್ತವ ನುಡಿದ್ದಾರೆ. ನನ್ನಂತೆಯೇ ಸೋಮಣ್ಣ ಅವರಿಗೂ ಜೋತಿಷ್ಯ ಕೇಳುವ ಅಭ್ಯಾಸ ಇರುವುದೇ ಸೋಜಿಗ. ಆದರೆ, ಅವರು ಸತ್ಯವನ್ನೇ ಹೇಳಿದ್ದಾರೆ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದರು.

ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿದ್ದೆವು. ಆದರೆ, ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್‌ನನ್ನು ಕಿತ್ತೆಸೆಯಲು ಎಂದು ಯಡಿಯೂರಪ್ಪ ಅವರ ಕೈ ಹಿಡಿದು ಗುಡುಗಿದರು.

ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ. ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ರೂಗಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ಆದರೆ, ಇದೇ ಚನ್ನಪಟ್ಟಣದ ಜನತೆಯಿಂದಲೇ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಡಿಕೆಶಿಗೆ ತಿರುಗೇಟು ನೀಡಿದ ಗೌಡರು!

ನಿಖಿಲ್ ಅವರು ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ನಾವು ಯಾರೂ ಹೇಳಿರಲಿಲ್ಲ. ಆದರೆ, ಕಳೆದ ಆರು ತಿಂಗಳಿನಿಂದ ಈ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ಗೆ ಈಗ ಏನಾಗಿದೆ? ಅವರ ಬದಲು ಮತ್ತೊಬ್ಬರು ಅಖಾಡದಲ್ಲಿದ್ದಾರೆ ಎಂದು ಡಿಕೆಶಿಗೆ ಗೌಡರು ತಿರುಗೇಟು ಕೊಟ್ಟರು.

ಡಿಕೆಶಿಯ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ್ಯ!

ನಿಖಿಲ್ ನನ್ನ ಮೊಮ್ಮಗ ಎನ್ನುವ ಮಾತು ಬೇಕಿಲ್ಲ. ನಾಮಪತ್ರ ಸಲ್ಲಿಸುವವರೆಗೂ ನಿಖಿಲ್ ಹೆಸರನ್ನು ನಾನು ಉಲ್ಲೇಖಿಸಲೇ ಇಲ್ಲ. ಡಿಕೆಶಿಯ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ್ಯ. ಮತದಾರರ ನಿರ್ಣಯವೇ ಎಲ್ಲದಕ್ಕೂ ಉತ್ತರ ನೀಡಲಿದೆ. ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ. 24ರ ಬೆಳಗ್ಗೆ ನಾನು ಹಾಗೂ ಯಡಿಯೂರಪ್ಪ ಅವರು ಒಟ್ಟಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಗುಡುಗಿದ ಗೌಡರು!

ಮೊಮ್ಮಗನ ಪರ ಬೃಹತ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಬ್ಬರದ ಭಾಷಣ ಮಾಡಿದರು. ತಮ್ಮ ಭಾಷಣದುದ್ದಕ್ಕೂ ಸರ್ಕಾರ, ಸಿಎಂ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಏರು ಧ್ವನಿಯಲ್ಲಿ, ಏಕವಚನದಲ್ಲೇ ಡಿಕೆಶಿ ವಿರುದ್ಧ ಕಿಡಿಕಾರಿದರು. ಇಳಿವಯಸ್ಸಿನಲ್ಲೂ ದೇವೇಗೌಡರ ಬೆಂಕಿಯ ಮಾತುಗಳು ಕಾರ್ಯಕರ್ತರ ಉತ್ಸಾಹಕ್ಕೆ ಕಾರಣವಾಯಿತು.