ಮಾಗಡಿ : ಹತ್ತು ತಿಂಗಳಲ್ಲಿ ರಾಜ್ಯ ಸರ್ಕಾರವನ್ನು ಉರುಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತು ಕೊಟ್ಟಿದ್ದಾರಂತೆ. ಆದರೆ ಯಾವ ರೀತಿ ಸರ್ಕಾರವನ್ನು ತೆಗೆಯುತ್ತಾರೆ ನಮಗೆ ಗೊತ್ತಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.
ತಾಲೂಕಿನ ಶ್ರೀಗಿರಿಪುರ ಗ್ರಾಪಂ ವ್ಯಾಪ್ತಿಯಲ್ಲಿ 5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಷಾ ಆದೇಶದಂತೆ 10 ತಿಂಗಳಲ್ಲಿ ರಾಜ್ಯಸರ್ಕಾರ ತೆಗೆಯುವುದಾಗಿ ಎಚ್.ಡಿ.ಕೆ. ಮಾತನ್ನು ಕೊಟ್ಟಿದ್ದಾರೆ. ಅದಕ್ಕಾಗಿಯೇ ಸರ್ಕಾರ ಉರುಳಿಸಲು ಷಡ್ಯಂತ್ರ ನಡೆಯುತ್ತಿದೆ. ಈಗಾಗಲೇ ಹಲವು ಶಾಸಕರನ್ನು ಭೇಟಿ ಮಾಡಿ ಹಣ ಹಾಗೂ ಮಂತ್ರಿಗಿರಿ ಆಮಿಷ ನೀಡುತ್ತಿದ್ದಾರೆ. ಯಾರು ಆಮಿಷ ಒಡ್ಡುತ್ತಿದ್ದಾರೆ ಎಂದು ಶಾಸಕರೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬಳಿ ಹೇಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಉರುಳಿಸುವ ಎಚ್‌ಡಿಕೆ ಆಸೆ ಈಡೇರುವುದಿಲ್ಲ ಎಂದರು. ನಮ್ಮ ಸರ್ಕಾರ ಸ್ಥಿರವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿವೆ. ನುಡಿದಂತೆ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಿ ರೈತರು ಖುಷಿಯಾಗಿದ್ದಾರೆ. ಇಂಥ ವೇಳೆ ಸರ್ಕಾರ ಕೆಡವಲು ಮುಂದಾಗಿರುವುದಕ್ಕೆ ಅರ್ಥವೇ ಇಲ್ಲ ಎಂದು ಕಿಡಿಕಾರಿದರು. ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡುವ ರೀತಿ ಕೆಲಸ ಮಾಡಬೇಕು. ಯಾವುದೋ ಒಂದು ಪಕ್ಷವನ್ನು ರಕ್ಷಣೆ ಮಾಡುವ ರೀತಿ ಕೆಲಸ ಮಾಡಬಾರದು. ಮುಂದೆ ಇದೇ ರೀತಿ ಮಾಡಿದರೆ ರಾಜ್ಯಪಾಲರ ಹಟಾವೋ ಕರ್ನಾಟಕ ಬಚಾವೋ ಎಂಬ ಆಂದೋಲವನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದರು. ಶ್ರೀಗಿರಿಪುರಕ್ಕೆ ಕೆಪಿಎಸ್‌ಸಿ ಶಾಲೆ ಮಂಜೂರಾಗಿ, ಕಾಮಗಾರಿಗೆ 4 ಕೋಟಿ ರೂ. ಅನುದಾನ ದೊರಕಿದೆ. 10 ಕೋಟಿ ರೂ. ವೆಚ್ಚದಲ್ಲಿ ಕುದೂರು ಶಿವಗಂಗೆ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಟೆಂಡರ್ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು. ಡಿ.ಕೆ.ಸುರೇಶ್ ಈ ಭಾರಿಯೂ ಗೆದ್ದಿದ್ರೆ ಮತಷ್ಟು ಅಭಿವೃದ್ಧಿ ಮಾಡಲು ದೊಡ್ಡಶಕ್ತಿ ಬರುತ್ತಿತ್ತು. ಡಿಕೆ. ಸುರೇಶ್ ಸೋತಿದ್ದರೂ ನಮ್ಮ ಬೆನ್ನಹಿಂದೆ ನಿಂತು ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು. ಶ್ರೀಗಿರಿಪುರ ಗ್ರಾಪಂ ಅಧ್ಯಕ್ಷೆ ಡಿ.ಸಿ.ಲಕ್ಷ್ಮಿ ಜಯರಾಮು, ಮಾಜಿ ಅಧ್ಯಕ್ಷರಾದ ಪ್ರಕಾಶ್, ಸಿದ್ದ ಲಿಂಗಪ್ಪ, ಗುತ್ತಿಗೆದಾರ ದೀಪು, ಹುಲಿಕಲ್ಲು ವಿಎಎಸ್‌ಎಸ್‌ಎನ್ ದೇವರಾಜು, ಮೈಕೋ ರಾಜಣ್ಣ, ಹೊನ್ನಪ್ಪ, ಇಒ ಜಯಪಾಲು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್ , ಪಿಡಿಒ ಬಸವರಾಜು ಇದ್ದರು.
ಗೌರವಯುತವಾಗಿ ಮಾತನಾಡಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅರವಿಂದ ಬೆಲ್ಲದ ಅಂದುಕೊಂಡಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂದು ಪ್ರತಿ ಪಕ್ಷದ ನಾಯಕನಾಗಿ ತಿಳಿದುಕೊಳ್ಳಬೇಕು. ಅವರ ಭಾಷೆ ಮಾತನಾಡಲು ನಮಗೂ ಬರುತ್ತದೆ ಎಂದು ಎಚ್.ಸಿ.ಬಾಲಕೃಷ್ಣ ಎಚ್ಚರಿಕೆ ನೀಡಿದರು.