ಜಿಲ್ಲೆ

ಬೆಂಗಳೂರಿನಿಂದಲೇ ಎಲ್ಲವೂ ನಡೆಯೋದಾದ್ರೆ ಪಂಚಾಯಿತಿಗಳ್ಯಾಕೆ ಬೇಕು ಎಂದು ರೇವಣ್ಣ ಪ್ರಶ್ನಿಸಿದ್ದೇಕೆ?

ಹಾಸನ: 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದ ಮೇಲೂ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಸೋಲಾರ್ ಅಳವಡಿಕೆ ಕಾಮಗಾರಿಯನ್ನು ಖಾಸಗಿ ಕಂಪನಿಗೆ ವಹಿಸುವ ಮೂಲಕ ಪಂಚಾಯಿತಿಗಳ ಸ್ವಾಯತ್ತತೆ ಕಸಿದುಕೊಂಡಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಈ ಮೂಲಕ ಪಡೆಯುತ್ತಿದೆ. ಎಂಟು ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಪಂ ಹಾಗೂ ಗ್ರಾಪಂಗಳಿಗೆ ಸೋಲಾರ್ ಅಳವಡಿಸುವ ಕಾಮಗಾರಿಯನ್ನು ಕೊಚ್ಚಿಯ ಎಂಎಸ್ ಇಂಟೆನ್ ಎಂಬ ಕಂಪನಿಗೆ 100 ಕೋಟಿ ರೂ.ಗೆ ವಹಿಸಿದ್ದಾರೆ. 4600 ಕೆವಿ ಸಾಮರ್ಥ್ಯದ ಕೆಲಸವನ್ನು ಕಂಪನಿ ವಹಿಸಿಕೊಂಡಿದೆ. ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡುವುದಾದರೆ ಪಂಚಾಯಿತಿಗಳು ಯಾಕೆ ಬೇಕು. ಪೂರ್ಣ ಐದು ವರ್ಷ ಆಡಳಿತಾಧಿಕಾರಿಗಳೇ ಕೆಲಸ ಮಾಡಲಿ ಬಿಡಿ. ಬೆಂಗಳೂರಿನಿಂದಲೇ ಎಲ್ಲವೂ ಆಗುವುದಾದರೆ ಪಂಚಾಯಿತಿಗಳು ಏಕೆ ಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

15ನೇ ಹಣಕಾಸು ಯೋಜನೆಯಡಿ ಶೇ. 25 ರಷ್ಟು ವಿದ್ಯುತ್ ಶುಲ್ಕ, ಶೇ. 5 ರಷ್ಟು ಅಂಗವಿಕಲರಿಗೆ, ಶೇ. 25 ಅನುದಾನ ಘನ ತ್ಯಾಜ್ಯ ವಿಲೇವಾರಿ, ಶೇ. 15 ಜಲಜೀವನ್ ಮಿಷನ್‌ಗೆ ಮೀಸಲಿಟ್ಟಿದ್ದಾರೆ. ಶೇ. 10 ಅನುದಾನವನ್ನು ಇತರ ಕಾಮಗಾರಿಗೆ, ಶೇ. 5 ಸೋಲಾರ್ ಅಳವಡಿಕೆಗೆ ಮೀಸಲಿಡಲಾಗಿದೆ. ಜೂನ್‌ನಲ್ಲಿಯೇ ಕ್ರಿಯಾ ಯೋಜನೆ ರೂಪಿಸಿ ಕೆಲವೆಡೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಈಗ ಅದನ್ನೆಲ್ಲ ಪರಿಗಣಿಸದೆ ಖಾಸಗಿ ಕಂಪನಿಗೆ ಕೆಲಸ ನೀಡಬೇಕೆಂದು ಹೇಳುವುದು ಸರಿಯಲ್ಲ ಎಂದರು.