ಜಿಲ್ಲೆಯ ಸಂಪತ್ತು (ಬಂಡೆ) ಕೊಳ್ಳೆ ಹೊಡಿದವರಿಂದ ಜಿಲ್ಲೆಯ ಜನತೆ ಮತ್ತೇನು ನಿರೀಕ್ಷಿಸಲು ಸಾಧ್ಯ? ಎನ್ನುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯನ್ನು ಮತ್ತೆ ಬೆಂಗಳೂರು ಜಿಲ್ಲೆ ಮಾಡುವ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ವಿಜಯವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕುಮಾರಸ್ವಾಮಿ, ಡಿಸಿಎಂ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಅಧಿಕಾರಕ್ಕೆ ಬಂದ ದಿನದಿಂದ ಒಂದೇ ಒಂದು ದಿನವೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತಿಸದೇ, ಇದೀಗ, ಜಿಲ್ಲೆಯ ಹೆಸರನ್ನು ಬದಲಾಯಿಸುವ ಮಾತುಗಳನ್ನು ಆಡುತ್ತಿರುವುದು ನಾಚಿಕೆಗೇಡು. ಜಿಲ್ಲೆಯ ಅಭಿವೃದ್ಧಿಗೆ ನನಗೊಮ್ಮೆ ಪೆನ್ನು ಕೊಡಿ ಅಂದವರು , ಆ ಪೆನ್ನನ್ನು ಯಾವುದಕ್ಕೆ ಬಳಸುತ್ತಿದ್ದಾರೆ ಎಂಬುದನ್ನು ಜನರೇ ನೋಡುತ್ತಿದ್ದಾರೆ. ಜಿಲ್ಲೆಯ ಸಂಪತ್ತು ಕೊಳ್ಳೆ ಹೊಡಿದವರಿಂದ ಜಿಲ್ಲೆಯ ಜನತೆ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ಹರಿಹಾಯ್ದರು.
ಅಧಿಕಾರದ ಮದದಲ್ಲಿರುವವರಿಗೆ ಜಿಲ್ಲೆಯ ಹೆಸರ ಜೊತೆ ಭಾವನಾತ್ಮಕ ಬೆಸುಗೆ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಎಳ್ಳಷ್ಟು ಚಿಂತಿಸದೇ ಇದೀಗ, ಜಿಲ್ಲೆಯ ಹೆಸರು ಬದಲಾವಣೆ ಮಾಡುವೆ ಎನ್ನುವ ಹಿಂದೆ ಜನರನ್ನು ದಿಕ್ಕು ತಪ್ಪಿಸುವ ಯತ್ನವಿದೆ.
ರಾಮನಗರ ಜಿಲ್ಲಾ ಕೇಂದ್ರವಾದ ನಂತರ ಆಗಿರುವ ಲಾಭವೇನು? ಅಭಿವೃದ್ಧಿ ಏನು? ಎಂಬುದು ಜಿಲ್ಲೆಯ ಕಟ್ಟಕಡೆಯ ಜನಸಾಮಾನ್ಯನಿಗೂ ಗೊತ್ತು. ಜಿಲ್ಲೆಯ ಸಂಪತ್ತನ್ನು ಕೊಳ್ಳೆ ಹೊಡೆದ ಇವರಿಗೆ ಹೇಗೆ ತಿಳಿಯಬೇಕು ಎಂದು ಕುಟುಕಿದ ಕುಮಾರಸ್ವಾಮಿ ರಾಮನಗರ ಜಿಲ್ಲೆ ಘೋಷಣೆಯಾಗುವ ಮೊದಲು ಹಾಗೂ ಘೋಷಣೆಯಾದ ನಂತರ, ನಮ್ಮ ಜಿಲ್ಲೆಯ ಭೂಮಿಯ ಬೆಲೆ ಎಷ್ಟಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ವಿಜಯ ದಶಮಿಯಂತಹ ಪುಣ್ಯದದಿನ ದೇವರ ಸನ್ನಿದ್ದಿಯಲ್ಲಿ ನಿಂತು, ರಾಮನಗರ ಹೆಸರ ಬದಲಾಯಿಸುವ ಮಾತುಗಳನ್ನಾಡಿರುವ ಈ ಮಹಾನುಭಾವನಿಗೆ ಜನರೇ ಉತ್ತರ ನೀಡುತ್ತಾರೆ ಎಂದರು.
ಈ ಹಿಂದೆ ತಮ್ಮ ಕೆಲಸಕಾರ್ಯಗಳಿಗೆ ಜಿಲ್ಲೆಯ ಜನತೆ ಬೆಂಗಳೂರಿಗೆ ಅಲೆಯಬೇಕಿತ್ತು. ಸಾರಿಗೆ ಹಾಗೂ ಊಟ ತಿಂಡಿಯ ವೆಚ್ಚಕ್ಕೆ ಸಾಲ ಮಾಡಿಕೊಂಡು ಹೋಗುವವರಿದ್ದರು. ಬೆಂಗಳೂರನ್ನು ಮೀರಿಸುವಷ್ಟರ ಮಟ್ಟಿಗೆ ಈಗ ನಮ್ಮ ಜಿಲ್ಲೆ ಬೆಳೆದಿದೆ ಅಂದರೆ, ಅದಕ್ಕೆ ರಾಮನಗರ ಜಿಲ್ಲೆಯಾಗಿದ್ದೆ ಕಾರಣ. ಮೊದಲು ಮೆಡಿಕಲ್ ಕಾಲೇಜು ಸ್ಥಳಾಂತರ ಇದೀಗ, ಜಿಲ್ಲೆಯ ಹೆಸರು ಬದಲಾವಣೆ ವಿಚಾರ. ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಅರ್ಹತೆ ಇಲ್ಲದವರು ಇನ್ನೇನು ಮಾಡಲು ಸಾಧ್ಯ ಎಂದು ಡಿಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.