ಜಿಲ್ಲೆ

ಎಚ್.ಡಿ.ಕೋಟೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ; ಮೂರು ಪಕ್ಷದಲ್ಲೂ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ತಂತ್ರ

reportermys


ಅವಿನಾಶ್ ಜೈನಹಳ್ಳಿ ಮೈಸೂರು
‘ವನಸಿರಿಗಳ ನಾಡು, ಆನೆಗಳ ಬೀಡು’ ಖ್ಯಾತಿಯ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ಕಣ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಹಲವು ತಂತ್ರಗಾರಿಕೆ ನಡೆಸುತ್ತಿದ್ದಾರೆ.


ಹಿಂದುಳಿದ ಹಣೆಪಟ್ಟಿಯಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿರುವ ಎಚ್.ಡಿ.ಕೋಟೆ ಕ್ಷೇತ್ರ ಕೇರಳದ ಗಡಿಗೆ ಹೊಂದಿಕೊಂಡಿದ್ದು, 2023ರ ಚುನಾವಣೆಯ ಕಾವು ಏರ ತೊಡಗಿದೆ. ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಮೀಸಲು ಕ್ಷೇತ್ರಗಳಿದ್ದು, ಈ ಪೈಕಿ ನಂಜನಗೂಡು ಮತ್ತು ತಿ.ನರಸೀಪುರ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ, ಎಚ್.ಡಿ.ಕೋಟೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ (ಪರಿಶಿಷ್ಟ ಜಾತಿ ಮೀಸಲು) ಕ್ಷೇತ್ರಕ್ಕೆ ಸೇರಿರುವುದು ವಿಶೇಷ.


ಕಾಂಗ್ರೆಸ್ ಹೊರತಾಗಿ ಪ್ರಮುಖ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ. ಪ್ರತಿ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆಯುತ್ತಿತ್ತು. ಒಂದೆರಡು ಚುನಾವಣೆಗಳಲ್ಲಿ ಬಿಜೆಪಿಯೂ ಪೈಪೋಟಿ ನೀಡಿರುವ ಇತಿಹಾಸವಿದೆ. ಆದರೆ, ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ಕೊಂಚ ಹಿನ್ನಡೆ ಅನುಭವಿಸಿದೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯೂ ಪ್ರಬಲವಾಗುತ್ತಿದ್ದು, ಚುನಾವಣಾ ಅಖಾಡದಲ್ಲಿ ತೊಡೆ ತಟ್ಟಲು ಕಮಲ ಪಾಳಯ ಸಜ್ಜಾಗುತ್ತಿದೆ. ಪ್ರಮುಖ ಮೂರೂ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿವೆ ಮತ್ತು ವಿವಿಧ ರೀತಿಯ ತಂತ್ರಗಾರಿಕೆ ನಡೆಸುತ್ತಿವೆ.

ಕಾಂಗ್ರೆಸ್‌ನಿಂದ ಹಾಲಿ ಶಾಸಕರೇ ಫಿಕ್ಸ್!:
ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬ ಕುತೂಹಲ ಕಾಡುತ್ತಿದೆ. ಜೆಡಿ ಎಸ್‌ನಿಂದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಸಿಗಲಿದೆಯೇ ಎಂಬ ಚರ್ಚೆ ಜೋರಾಗಿದೆ. ಈ ಮಧ್ಯೆ, ಎಲ್ಲ ಪಕ್ಷಗಳ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ.
2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಶಾಸಕ ಅನಿಲ್ ಚಿಕ್ಕಮಾದು ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಹಾಗಾಗಿ, ಕ್ಷೇತ್ರದಲ್ಲಿ ಶಾಸಕರ ತಿರುಗಾಟ ಜೋರಾಗಿದ್ದು, ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಎರಡು ವರ್ಷದಿಂದ ಕ್ಷೇತ್ರದಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ, ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಕಾಂಗ್ರೆಸ್ ಪಕ್ಷದ ಗ್ರಾಮ ಸ್ವರಾಜ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಾರೆ. ಸಾವಿರಾರು ಮತದಾರರನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ನೋಂದಣಿ ಮಾಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಸಕಲ ರೀತಿಯಲ್ಲೂ ತಯಾರಾಗುತ್ತಿದ್ದಾರೆ.


ಶಾಸಕ ಅನಿಲ್ ಅವರ ತಂದೆ ಚಿಕ್ಕಮಾದು 2013ರ ಚುನಾವಣೆಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದಲೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆ ವೇಳೆ ಅನಿಲ್, ಹುಣಸೂರು ತಾಲೂಕಿನ ಹನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದರು.
ಚಿಕ್ಕಮಾದು ಅವರ ನಿಧನದ ನಂತರ 2018ರ ಚುನಾವಣೆಯಲ್ಲಿ ಅನಿಲ್ ಎಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಪಡೆದರು. ಈಗ ಅವರು ಮತ್ತೊಂದು ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ.

ಬಿಜೆಪಿಯಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳು:
ಇತ್ತೀಚೆಗೆ ಕ್ಷೇತ್ರದಲ್ಲಿ ಬಿಜೆಪಿ ಕೂಡ ಪ್ರಬಲವಾಗುತ್ತಿದ್ದು, ಆ ಪಕ್ಷದಿಂದ ಸ್ಪರ್ಧಿಸಲು ಮೂವರು ಪ್ರಯತ್ನ ನಡೆಸುತ್ತಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮುಖಂಡ ಕೃಷ್ಣಸ್ವಾಮಿ, ಜಂಗಲ್ಸ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ಪೈಕಿ ಸಿದ್ದರಾಜು 2013 ಹಾಗೂ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅಂತೆಯೆ, ಈ ಬಾರಿ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಅಪ್ಪಣ್ಣ ಮತ್ತು ಕೃಷ್ಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಇಬ್ಬರೂ ಈ ಹಿಂದೆ ಯಡಿಯೂರಪ್ಪ ಜತೆ ಕೆಜೆಪಿಗೆ ಹೋಗಿದ್ದರು. 2013ರ ಚುನಾವಣೆಯಲ್ಲಿ ಅಪ್ಪಣ್ಣ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಕೃಷ್ಣಸ್ವಾಮಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕೃಷ್ಣಸ್ವಾಮಿ ಪಿಎಚ್.ಡಿ ಪದವೀಧರರಾಗಿದ್ದು, ಕೆಎಸ್‌ಎಫ್‌ಸಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈ ಮೂವರಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಪುತ್ರನಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧರಾದ ಚಿಕ್ಕಣ್ಣ!:
ಮಾಜಿ ಶಾಸಕ ಚಿಕ್ಕಣ್ಣ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ಚುನಾವಣಾ ರಾಜಕಾರಣದಿಂದ ಅವರು ನಿವೃತ್ತಿಯಾಗುತ್ತಿದ್ದು, ಪುತ್ರ ಜಯಪ್ರಕಾಶ್ ಅವರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಜೆಡಿಎಸ್‌ನಿಂದ ಜಯಪ್ರಕಾಶ್ ಮತ್ತು ಕೃಷ್ಣನಾಯಕ ಪ್ರಬಲ ಆಕಾಂಕ್ಷಿಗಳಾಗಿದ್ದು, ಇಬ್ಬರ ನಡುವೆ ಜೆಡಿಎಸ್ ಟಿಕೆಟ್‌ಗೆ ಭರ್ಜರಿ ಪೈಪೋಟಿ ನಡೆಯುತ್ತಿದೆ.
ಚಿಕ್ಕಣ್ಣ 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದರು. 2013ರಲ್ಲಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡರು. ಆನಂತರ ಬಿಜೆಪಿ ಸೇರಿದರು. ಬಳಿಕ ಬಿಜೆಪಿಯಿಂದ ಹೊರಬಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಗುರುತಿಸಿ ಕೊಂಡು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಆ ವೇಳೆ ಟಿಕೆಟ್ ಕೈತಪ್ಪುವ ಸೂಕ್ಷ್ಮತೆ ತಿಳಿದ ಅವರು, ಜೆಡಿಎಸ್ ಸೇರ್ಪಡೆಗೊಂಡು, ಆ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡರು.