ಮೈಸೂರು: ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ’ ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬಾರದು. ದೇವೇಗೌಡರಿಗೆ ನಾಯಕರನ್ನು ಬೆಳೆಸುವುದು ಗೊತ್ತು ಹೊರೆತು ತುಳಿಯುವುದು ಗೊತ್ತಿಲ್ಲ ಎಂದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೆ.ವೆಂಕಟೇಶ್ ಅವರ ಮೇಲೆ ಅಪಾರ ಗೌರವವಿತ್ತು. ಆದರೆ, ಈ ಹೇಳಿಕೆಯಿಂದ ಎಲ್ಲ ಗೌರವವು ಮರೆಯಾಗಿದೆ. ಕೆ.ವೆಂಕಟೇಶ್ ಅವರನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು, ದೇವೆಗೌಡರು ಎಂಬುದನ್ನು ಮರೆಯಬಾರದು.
ನನಗೆ ಟಿಕೆಟ್ ಕೊಡಿಸಬೇಕು ಎಂದು ಒಂದು ಗಂಟೆ ಕಾಲ ಕಾದು ಅಮಿತ್ ಷಾ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದು ದೇವೆಗೌಡರು. ನನಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ ಪ್ರಮುಖರಲ್ಲಿ ದೇವೇಗೌಡರು ಒಬ್ಬರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಎಂದು ಹೇಳಿದರೆ ಹೇಗೆ. ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು.