ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವಗೌಡ ಅವರು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರು, ಮೋದಿಯಂತಹ ನಾಯಕನನ್ನು ಕಂಡಿರಲಿಲ್ಲ ಎಂದಿದ್ದಾರೆ.
ಹಾಗಾದರೆ ನೆಹರು, ಇಂದಿರಾಗಾಂಧಿ ಅವರಿಗಿಂತ ಮೋದಿ ಸಾಧನೆ ಮಾಡಿದ್ದಾರಾ?. ನೆಹರು, ಇಂದಿರಾಗಾಂಧಿ ಅವರು ದೇಶದ ಬಡತನ ನಿರ್ಮೂಲನೆ ಮಾಡಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಆದರೆ ದೇವಗೌಡರು ಮೋದಿಯನ್ನು ಕೊಂಡಾಡುತ್ತಿರುವುದು ವಿಪರ್ಯಾಸ. ದೇವೇಗೌಡ ಅವರಂತಹ ಹಿರಿಯ ನಾಯಕರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದ ಅವರು, ದೇವೇಗೌಡ ಅವರು ಜಾತ್ಯಾತೀತ ಪದಕ್ಕೂ ತಿಲಾಂಜಲಿ ನೀಡಿದ್ದಾರೆ ಎಂದು ಟೀಕಿಸಿದರು.