ಜಿಲ್ಲೆ

ಹವ್ಯಕ ಸಮಾಜ ಪ್ರತಿಭೆಗಳ ಆಗರ; ಡಾ.ಗಿರಿಧರ ಕಜೆ ವ್ಯಾಖ್ಯಾನ, ಹವ್ಯಕ ಪ್ರಶಸ್ತಿ ಪ್ರದಾನ

ಬೆಂಗಳೂರು: ಹವ್ಯಕ ಸಮಾಜವು ಪ್ರತಿಭೆಗಳ ಆಗರವಾಗಿದ್ದು, ಇಲ್ಲಿ ಸಾಧಕರು ಪ್ರಶಸ್ತಿಯ ಹಿಂದೆ ಹೋಗುವುದಿಲ್ಲ. ಬದಲಾಗಿ ಪ್ರಶಸ್ತಿಗಳೇ ಸಾಧಕರನ್ನು ಅರಸಿ ಬರುತ್ತವೆ ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದ್ದಾರೆ.

ಅಖಿಲ ಹವ್ಯಕ ಮಹಾಸಭಾ ಭಾನುವಾರ ಮಲ್ಲೇಶ್ವರದಲ್ಲಿ ಹಮ್ಮಿಕೊಂಡಿದ್ದ 82ನೇ ವಾರ್ಷಿಕ ಹವ್ಯಕ ಸಂಸ್ಥಾಪನೋತ್ಸವದಲ್ಲಿ ಹವ್ಯಕ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಇತ್ತಿಚೆಗೆ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣರ ಪವಿತ್ರ ಜನಿವಾರವನ್ನು ಕಿತ್ತು ಹಾಕುವ ಮನಸ್ಥಿತಿ ಪ್ರದರ್ಶಿಸಿದ್ದು ಸಮಾಜಕ್ಕೆ ಮಾಡಿದ ಅವಮಾನ. ಹಾಗೂ ಕಾಶ್ಮೀರದಲ್ಲಿ ಹಿಂದುಗಳ ನರಮೇಧ ನಡೆದ ಘಟನೆ ಖಂಡನೀಯವಾಗಿದ್ದು, ಜನಿವಾರ ಕಿತ್ತವರಿಗೆ, ಪ್ರಾಣ ತೆಗೆದ ಭಯೋತ್ಪಾದಕರಿಗೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಕಜೆ ಹೇಳಿದರು.

ಸಮಾರಂಭದಲ್ಲಿ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಭಾಜನರಾದ 8 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಉದ್ಯಮಿ ಮತ್ತು ಸಮಾಜ ಸೇವಕ ಜಿ. ವಿ. ಭಟ್ ಗೋರೆ ಹವ್ಯಕ ವಿಭೂಷಣ (₹ 30 ಸಾವಿರ ನಗದು), ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ಮತ್ತು ಸಂಶೋಧನಾ ತಜ್ಞ ಎಸ್.ಎನ್. ಹೆಗಡೆ, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪರಮೇಶ್ವರ ಹೆಗಡೆ ಶಿರಸಿ ಅವರಿಗೆ ಹವ್ಯಕ ಭೂಷಣ (ತಲಾ ₹ 20 ಸಾವಿರ ನಗದು), ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ.ದಿಲೀಪ್ ಅವರಿಗೆ ಹವ್ಯಕಶ್ರೀ (ತಲಾ ₹ 10 ಸಾವಿರ ನಗದು), ಹವ್ಯಕ ಮಾಸ ಪತ್ರಿಕೆಯ ನಿರ್ದೇಶಕ ನಾರಾಯಣ ಭಟ್ ಹುಳೇಗಾರು ಹವ್ಯಕ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಪಲ್ಲವ’ ಪ್ರಶಸ್ತಿ ಮತ್ತು ಜನಿವಾರಕ್ಕಾಗಿ ಪರೀಕ್ಷೆಯನ್ನು ದಿಕ್ಕರಿಸಿದ ಬೀದರಿನ ಸಚಿವ್ರತ ಕುಲಕರ್ಣಿ ಮತ್ತು ತೀರ್ಥಹಳ್ಳಿಯ ಅಭಿಜ್ಞಾಗೆ ಧರ್ಮಶ್ರೀ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್, ಕಿರುತೆರೆ ನಿರ್ದೇಶಕ ಬ.ಲ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

"ನಮ್ಮ ಸಮುದಾಯವು ಯಾವುದೇ ಪ್ರಶಸ್ತಿ ಪುರಸ್ಕಾರದ ಅಪೇಕ್ಷೆಯಿಲ್ಲದೆ ಬೆಳೆದಿದೆ. ನಮ್ಮ ಹಿರಿಯರು ಸಾಕಷ್ಟು ಕೆಲಸ ಮಾಡಿದರೂ ಪ್ರಶಸ್ತಿಗಳಿಗೆ ಹಂಬಲಿಸಲಿಲ್ಲ. ಸೀಮೆ ಎಣ್ಣೆಯ ದೀಪದ ಬೆಳಕಿನಲ್ಲಿ ಮಹಾನ್ ಗ್ರಂಥಗಳನ್ನು ಬರೆದಿದ್ದಾರೆ. ಅವುಗಳ ಓದಿನಿಂದ ನಮಗೆ ಸಾಧಿಸಲು ಸಾಧ್ಯವಾಯಿತು. ಕೃಷಿ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದವರು ತಮ್ಮ ಅಸ್ತಿತ್ವ ಕಂಡುಕೊಂಡಿದ್ದಾರೆ." -ಪಾದೇಕಲ್ಲು ವಿಷ್ಣುಭಟ್ಟ, ವಿದ್ವಾಂಸರು