ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ 4-5 ದಿನಗಳಿಂದ ಜಿಟಿಜಿಟಿ ಸುರಿಯುತ್ತಿದ್ದ ಮಳೆ, ಶುಕ್ರವಾರ ಮಧ್ಯರಾತ್ರಿ 1:20ರ ವೇಳೆಗೆ ಭಾರಿ ಪ್ರಮಾಣದಲ್ಲಿ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ ಸುರಿದಿದೆ. ನಸುಕಿನ 4 ಗಂಟೆಯ ವರೆಗೂ ಗುಡುಗು-ಮಿಂಚಿನ ಆರ್ಭಟ ಮುಂದುವರಿದಿದ್ದು, ಮಲಗಿದ್ದ ಜನರೆಲ್ಲ ಭೀತಿಗೊಳಗಾದರಲ್ಲದೆ, ಎಲ್ಲರ ಎದೆ ಬಡಿತ ಹೆಚ್ಚಿಸಿತ್ತು.
ಕಾಪು ತಾಲೂಕಿನಲ್ಲಿ ಗರಿಷ್ಠ 130.9 ಮಿ.ಮೀ. ಮಳೆಯಾಗಿದ್ದು, ಬೈಂದೂರು ತಾಲೂಕಿನಲ್ಲಿ ಕನಿಷ್ಠ 43.7 ಮಿ.ಮೀ. ಮಳೆ ಸುರಿದಿದೆ. ಕಾರ್ಕಳ ಹಾಗೂ ಬ್ರಹ್ಮಾವರ- 78.7, ಕುಂದಾಪುರ- 52.9, ಉಡುಪಿ- 90.9, ಹೆಬ್ರಿ- 70.0 ಮಿ.ಮೀ. ಮಳೆಯಾಗಿದ್ದು, ತಾಲೂಕಿನಲ್ಲಿ 69.6 ಮಿ.ಮೀ. ಸರಾಸರಿ ಮಳೆ ಸುರಿದಿದೆ.
ಸಿಡಿಲಿನ ತೀವ್ರತೆಯಿಂದಾಗಿ ಜಿಲ್ಲೆಯ 30ಕ್ಕೂ ಹೆಚ್ಚು ಮನೆ ಹಾಗೂ ತೋಟಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಸಾದು ಮೂಲ್ಯ ಇವರ ಮನೆಗೆ ಸಿಡಿಲಿ ಬಡಿದು ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನ ಕಟ್ಟಿಂಗೇರಿಯ ಹರೀಶ್, ಮುಲ್ಲಾರುವಿನ ದಿನೇಶ್ ಕೋಟ್ಯಾನ್, ಶಿರ್ವ ಗ್ರಾಮದ ಲೀಲಾ ಎಸ್. ಆಚಾರ್ಯ ಅವರ ಮನೆ ಹಾನಿಗೊಂಡಿದೆ. ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಅಬ್ದುಲ್ ರಹೀಮ್ ಸಾಹೇಬ್ರ ಮನೆ ಸಿಡಿಲಿಗೆ ಹಾನಿಗೊಂಡಿದ್ದು, ಪಡುತೋನ್ಸೆಯ ನೂರುದ್ದೀನ್ ಸಾಹೇಬ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ದುರ್ಗಮ್ಮ ಶೇರಿಗಾರ್ತಿ, ಬೈಂದೂರಿನ ಭಾಗೀರಥಿ, ಸಂದೇಶ್ ಹೆಬ್ಬಾಗಿಲು, ಚೇತನಕುಮಾರ್ ಶೇರಿಗಾರ್, ಶಾರದಾ ಎಸ್. ಪೂಜಾರಿ, ನಾಗರಾಜು ಜಿ. ಶೇರಿಗಾರ್, ಜುಲೇಖಾ ಅಬ್ಬಾಸ್, ಮರ್ಲಿ ಗೋವಿಂದ, ಯಳಜಿತ್ ಗ್ರಾಮದ ಜ್ಯೋತಿ ಕೆ. ಮರಾಠಿ, ರೇವತಿ ಮಹಾಬಲ, ಯಡ್ತರೆ ಗ್ರಾಮದ ಬಾಬು ಜಿ. ಮೊಗವೀರ, ಶಾಂತಿ ಮಂಜುನಾಥ, ಮೂಕಾಂಬು ಮಹಾಬಲ, ನಾಗರತ್ನಾ ಗೋವಿಂದ, ಶ್ರೀನಿವಾಸ ಕೆ. ನಾಯ್ಕ್, ವೀರಭದ್ರ ಮಂಜಯ್ಯ, ಪಡುವರಿ ಗ್ರಾಮದ ಕೊಲ್ಲೂರಿ ಪೂಜಾರಿ, ಮರ್ಲಿ ಎಂ. ಪೂಜಾರಿ, ಪಾರ್ವತಿ ಎಲ್. ಪೂಜಾರಿ ಇವರುಗಳ ಮನೆ ಮೇಲೆ ಮರ ಬಿದ್ದು ಹಾಗೂ ಭಾರಿ ಗಾಳಿಯಿಂದಾಗಿ ಭಾಗಶಃ ಹಾನಿಯಾಗಿದೆ.
ಬೈಂದೂರಿನ ವಿಘ್ನೇಶ್ವರ ಎಸ್ ಮುದ್ದೋಡಿ- ಬಾಳೆ ತೋಟ, ರಾಮು ಕೆ. ಸೇರಿಗಾರ್- ಅಡಿಕೆ ಬೆಳೆ, ನಾಗರಾಜು ಸೇರಿಗಾರ್- ಬಾಳೆ ಹಾಗೂ ಅಡಿಕೆ ಬೆಳೆ, ಪಡುವರಿ ಗ್ರಾಮದ ಮರ್ಲಿ ನಾಗಪ್ಪ- ಅಡಿಕೆ ಬೆಳೆ, ಯಡ್ತರೆ ಗ್ರಾಮದ ವೀರಭದ್ರ ಮಂಜಯ್ಯ- ಅಡಿಕೆ ಬೆಳೆ ಹಾನಿಯಾಗಿದೆ.
ಮೊಳಹಳ್ಳಿ ಗ್ರಾಮದ ಗೋವಿಂದ ನಾಯ್ಕ, ಸಂಜೀವ ಮೊಗವೀರ, ಅಂಪಾರು ಗ್ರಾಮದ ಯಶೋದಾ ಪಾಣಾ, ಸಿದ್ದು ಪೂಜಾರ್ತಿ ಇವರ ದನದ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೇ 27ರಿಂದ 30ರ ವರೆಗೂ ಉಡುಪಿ ಹಾಗೂ ದನ ಕನ್ನಡ ಜಿಲ್ಲೆಯಲ್ಲಿ ಗುಡುಗು&ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರಿ ಮಳೆಯಿಂದಾಗಿ ಜಿಲ್ಲಾದ್ಯಂತ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, 12ಕ್ಕೂ ಹೆಚ್ಚು ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ. ಸುಮಾರು 2 ಕಿ.ಮೀ.ಯಷ್ಟು ವಿದ್ಯುತ್ ತಂತಿ ತುಂಡಾಗಿದ್ದು, ಮೆಸ್ಕಾಂಗೂ ಅಪಾರ ನಷ್ಟ ಸಂಭವಿಸಿದೆ. ಹಾನಿಗೊಂಡ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ 'ವಿಜಯವಾಣಿ'ಗೆ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಭಾಗದ ಕೆಲವು ಸಂಪರ್ಕ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಕಂಬ ಉರುಳಿದ್ದರಿಂದ ಸಂಚಾರಕ್ಕೆ ತೊಡಕಾಗಿತ್ತು. ಶುಕ್ರವಾರ ರಾತ್ರಿ ಹೋದ ಕರೆಂಟ್, ಬೆಳಗ್ಗೆ ಅಲ್ಪ ಸಮಯ ಇತ್ತಾದರೂ ರಿಪೇರಿ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯವರೆಗೂ ವಿದ್ಯುತ್ ಇರಲಿಲ್ಲ.
ಜಿಲ್ಲೆಯಲ್ಲಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಕಾರ್ಕಳದ ಮುಂಡ್ಲಿ ಅಣೆಕಟ್ಟಿನಲ್ಲಿ ನೀರು ತುಂಬಿದ್ದರಿಂದ 2 ಗೇಟ್ ತೆರೆಯಲಾಗಿದೆ. ಇದರಿಂದ ಸ್ವರ್ಣ ನದಿಯಲ್ಲಿ ಒಳಹರಿವು ಹೆಚ್ಚಾಗಿ, ಬಜೆ ಡ್ಯಾಂನಲ್ಲೂ ಸಹ ಸಾಕಷ್ಟು ಪ್ರಮಾಣದ ನೀರು ತುಂಬಿದೆ. ಹೀಗಾಗಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇಂದಿನಿಂದ ರೇಶನಿಂಗ್ ಕೈಬಿಟ್ಟು, ನಿರಂತರವಾಗಿ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ