ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ಮಲ್ಲಿಕಾರ್ಜುನ ಸಜ್ಜನಶೆಟ್ಟರ್​ ಅವರಿಗೆ ಡಮ್ಮಳ್ಳಿಯ ಯುವಕರಾದ ಸುನೀಲ ಹಡಗದ, ಅರುಣ ಬಣಕಾರ ಹಾಗೂ ಬಸವರಾಜ ಹುಲ್ಲತ್ತಿ ಅವರು ಒಡವೆ (gold jewelry) ಹಿಂದಿರುಗಿಸಿದರು. 
ಹಾವೇರಿ

gold jewelry ಚಿನ್ನಾಭರಣ ಹಿಂದಿರುಗಿಸಿದ ಯುವಕರು

ಹಿರೇಕೆರೂರು: ಬೆಲೆ ಬಾಳುವ ಬಂಗಾರದ ಆಭರಣಗಳನ್ನು (gold jewelry) ಕಳೆದುಕೊಂಡ ಮಾಲೀಕರಿಗೆ ಮರಳಿ ತಲುಪಿಸಿ, ಮಾನವೀಯತೆ ಮೆರೆದ ಟನೆ ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಬುಧವಾರ ನಡೆಯಿತು.
ಚಿಕ್ಕೇರೂರ ಗ್ರಾಮದ ಮಲ್ಲಿಕಾರ್ಜುನ ನಿಂಗಪ್ಪ ಸಜ್ಜನಶೆಟ್ಟರ ಅವರು ತಮ್ಮೂರಿನ ಕೆನರಾ ಬ್ಯಾಂಕ್​ನಲ್ಲಿ 40 ಗ್ರಾಂ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದರು. ಮಂಗಳವಾರ ಸಾಲ ಮರುಪಾವತಿಸಿ, 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಬಿಡಿಸಿಕೊಂಡಿದ್ದರು. ಮನೆಗೆ ಹೋಗುವ ಧಾವಂತದಲ್ಲಿ ಬ್ಯಾಂಕ್​ ಮುಂಭಾಗ ರಸ್ತೆಯಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದರು.
ಬ್ಯಾಂಕ್​ಗೆ ಬಂದಿದ್ದ ತಾಲೂಕಿನ ಡಮ್ಮಳ್ಳಿ ಗ್ರಾಮದ ಸುನೀಲ ಹಡಗದ, ಅರುಣ ಬಣಕಾರ ಹಾಗೂ ಬಸವರಾಜ ಹುಲ್ಲತ್ತಿ ಅವರಿಗೆ ಈ ಚಿನ್ನಾಭರಣಗಳು ಸಿಕ್ಕಿದ್ದವು. ಈ ಮೂವರು ಯುವಕರು ಬ್ಯಾಂಕ್​ ವ್ಯವಸ್ಥಾಪಕರನ್ನು ಭೇಟಿ ಮಾಡಿ, ವಿಷಯ ತಿಳಿಸಿದ್ದರು. ಅಲ್ಲದೆ, ಯಾರಾದರೂ ಚಿನ್ನಾಭರಣ ಕಳೆದು ಹೋದ ಬಗ್ಗೆ ತಮ್ಮಲ್ಲಿ ಕೇಳಿಕೊಂಡು ಬಂದರೆ, ದಾಖಲೆ ಮತ್ತು ಸಾಯೊಂದಿಗೆ ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿ. ಯಾರೂ ಬಾರದಿದ್ದರೆ, ಸ್ವಲ್ಪದಿನ ಕಾದು ನೋಡಿ, ಪೊಲೀಸ್​ ಇಲಾಖೆಗೆ ಒಪ್ಪಿಸುತ್ತೇವೆ ಎಂದು ತಮ್ಮ ಮೊಬೈಲ್​ ಸಂಖ್ಯೆ ನೀಡಿ, ಹೋಗಿದ್ದರು.
ಮಲ್ಲಿಕಾರ್ಜುನ ಅವರು ಬ್ಯಾಂಕ್​ ವ್ಯವಸ್ಥಾಪಕರ ಬಳಿ ಬಂದು ಒಡವೆಗಳು ಕಳೆದಿರುವ ವಿಷಯ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ವ್ಯವಸ್ಥಾಪಕರು, ನಿತ್ಯದ ವಹಿವಾಟು ಪರಿಶೀಲನೆ ನಡೆಸಿ, ಕೊನೆಗೆ ಒಡವೆಗಳು ಮಲ್ಲಿಕಾರ್ಜುನ ಅವರಿಗೆ ಸೇರಿದ್ದವು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ನಂತರ ಯುವಕರ ಮೊಬೈಲ್​ ಸಂಖ್ಯೆ ನೀಡಿ, ಸಂಪಕಿರ್ಸುವಂತೆ ತಿಳಿಸಿದರು. ನಂತರ ಮಲ್ಲಿಕಾರ್ಜುನ ಅವರು ಡಮ್ಮಳ್ಳಿ ಗ್ರಾಮಕ್ಕೆ ತೆರಳಿ ಅಗತ್ಯ ದಾಖಲೆ, ಸಾ ನೀಡಿದ್ದರಿಂದ ಯುವಕರು, ಬಂಗಾರದ ಒಡವೆಗಳನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಯುವಕರ ಕಾರ್ಯಕ್ಕೆ ಗ್ರಾಮ ಸೇರಿದಂತೆ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.