ರವೀಂದ್ರ ಹಾಗೂ ರೇಖಾ ಮದುವೆಯಾದ ಚಿತ್ರ.
ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ
ಕನ್ಯೆ ಕೊಡಿಸುವ ನೆಪದಲ್ಲಿ ಯುವಕನೊಬ್ಬನಿಗೆ ಎರಡು ಮಕ್ಕಳ ತಾಯಿಯನ್ನು ಮದುವೆ ಮಾಡಿಸಿ ವಂಚಿಸಿರುವ ಘಟನೆ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮದುವೆ ನೆಪದಲ್ಲಿ ಲಕ್ಷಾಂತರ ರೂ. ಪಡೆದು ವಂಚಿಸುವ ಜಾಲ ಇದೀಗ ಪತ್ತೆಯಾಗಿದೆ.
ತುಮ್ಮಿನಕಟ್ಟಿ ಗ್ರಾಮದ ಯುವಕ ರವೀಂದ್ರ ಜವಳಿ ಎಂಬಾತ ಮೋಸದ ಜಾಲಕ್ಕೆ ಬಿದ್ದವನು. ಈತ ಕನ್ಯೆ ಹುಡುಕುತ್ತಿದ್ದ ಸಮಯದಲ್ಲಿ ಶಾರದಮ್ಮ ಎಂಬ ಮದುವೆ ಬ್ರೋಕರ್ ಪರಿಚಯವಾಗಿತ್ತು. ಆಕೆ ತಾನೇ ಕನ್ಯೆ ಹುಡುಕಿ ಮದುವೆ ಮಾಡಿಸುವುದಾಗಿ ರವೀಂದ್ರನಿಗೆ ಭರವಸೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡಿದ್ದಳು.
ಅದರಂತೆ ದಾವಣಗೆರೆಯಲ್ಲಿ ರೇಖಾ ಎಂಬ ಕನ್ಯೆ ಇದೆ. ಒಳ್ಳೆಯ ಹುಡುಗಿ, ನಿಮಗೆ ಜೋಡಿ ಆಗುತ್ತದೆ ಎಂದು ನಂಬಿಸಿ ಕಳೆದ ಐದು ದಿನದ ಹಿಂದೆ ಮದುವೆ ಕೂಡ ಮಾಡಿಸಿದ್ದರು. ಮಂಗಳವಾರ ಬೆಳಗ್ಗೆ ರೇಖಾ ಮೊಬೈಲ್ೆನ್ ಇಟ್ಟು ಹೊರಗೆ ಹೋದಾಗ ಆಕೆಯ ಇಬ್ಬರು ಮಕ್ಕಳು ಕರೆ ಮಾಡಿದ್ದಾರೆ. ಆಗ ರವೀಂದ್ರ ಫೋನ್ ಎತ್ತಿದ್ದಾನೆ. ಇದರಿಂದ ರೇಖಾ ಕನ್ಯೆ ಅಲ್ಲ ಎರಡು ಮಕ್ಕಳ ತಾಯಿ ಎಂದು ತಿಳಿದು ಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ತುಮ್ಮಿನಕಟ್ಟಿ ಗ್ರಾಮದಿಂದ ರೇಖಾ ಕಾಲ್ಕೀಳಲು ನೋಡಿದ್ದಾಳೆ. ಆದರೆ, ರವೀಂದ್ರ ಹಾಗೂ ಗ್ರಾಮಸ್ಥರು ಸೇರಿ ಆಕೆಯನ್ನು ಹಿಡಿದು ಹಲಗೇರಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ರೇಖಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸುಳ್ಳು ತಂದೆ ತಾಯಿ ಸೃಷ್ಟಿ
ರವೀಂದ್ರನನ್ನು ಮದುವೆಗೆ ಒಪ್ಪಿಸಿದ ಶಾರದಮ್ಮ, ಹಿರೇಕೆರೂರ ದುರ್ಗಾದೇವಿ ದೇವಸ್ಥಾನದಲ್ಲಿ ಮದುವೆ ನಿಶ್ಚಿಯಸಿದ್ದರು. ಅಲ್ಲಿಗೆ ರೇಖಾಳ ತಂದೆ-ತಾಯಿ ಎಂದು ಬೇರೆಯವರನ್ನು ಕರೆತಂದು ಪರಿಚಯಿಸಿ ರವೀಂದ್ರನ ಕುಟುಂಬಕ್ಕೆ ಯಾವುದೇ ಸಂದೇಹ ಬಾರದಂತೆ ನೋಡಿಕೊಂಡಿದ್ದರು. ಆದರೆ, ನಿಜಾಂಶ ರೇಖಾಳ ಮಕ್ಕಳ ಮೂಲಕ ಹೊರ ಬರಲು ಕೇವಲ ಐದು ದಿನ ತೆಗೆದುಕೊಂಡಿದೆ ಎಂಬುದು ಗನಮನಾರ್ಹ ಸಂಗತಿಯಾಗಿದೆ.
ಗ್ಯಾಂಗ್ ಕೈಚಳಕ
ಮದುವೆ ಮಾಡಿಸಲು ಬ್ರೋಕರ್ ಶಾರದಮ್ಮ 2.50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅದರಂತೆ ರವೀಂದ್ರ ಕುಟುಂಬದವರು ಹಣ ನೀಡಿದ್ದಾರೆ. ಇದಾದ ಬಳಿಕ ಮದುವೆ ಮಾಡಿಸಿದ್ದಾರೆ. ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಇವರದೊಂದು ಗ್ಯಾಂಗ್ ಇದ್ದು ಮದುವೆಯಾಗದ ಹುಡುಗರನ್ನು ಟಾರ್ಗೆಟ್ ಮಾಡಿ ಕನ್ಯೆ ಕೊಡಿಸುವ ನೆಪದಲ್ಲಿ ಹಣ ದೋಚುವ ದಂಧೆ ಮಾಡುತ್ತಿದ್ದಾರೆ ಆರೋಪ ಕೇಳಿ ಬಂದಿದೆ. ಪೊಲೀಸರು ಈ ಕುರಿತು ಸೂಕ್ತ ತನಿಖೆ ನಡೆಸುವ ಮೂಲಕ ಸತ್ಯಾಂಶ ಬಯಲಿಗೆಳೆಯಬೇಕಿದೆ.