ಸವಣೂರ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಯುವ ಸಾಹಿತಿ ಚಿನ್ನು ಎಸ್. ರಾಗಿ ರಚಿತ ಅಕ್ಷರ ಕಾವ್ಯಚಿತ್ರ ಕವನ ಸಂಕಲನವನ್ನು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಬಿಡುಗಡೆಗೊಳಿಸಿದರು. ತಹಸೀಲ್ದಾರ್ ರವಿಕುಮಾರ ಕೊರವರ, ಸಾಹಿತಿ ಸತೀಶ ಕುಲಕರ್ಣಿ, ಲತಾ ವಾಲಿ, ಡಾ. ರಾಜಶೇಖರ ಡೊಂಬರಮತ್ತೂರ, ಡಾ. ಮಹಾಂತೇಶ ಕುತನಿ ಇತರರಿದ್ದರು. 
ಹಾವೇರಿ

ಕೆಲ ಕವನ ಬರೆದು ಪ್ರಕಟಿಸಿದರೆ ಕವಿ ಆಗಲಾರ

ಪ್ರಮುಖ ಮುಖ್ಯಾಂಶಗಳು

  • ಎಸಿ ಶುಭಂ ಶುಕ್ಲಾ ಅಭಿಪ್ರಾಯ
  • ಅಕ್ಷರ ಕಾವ್ಯಚಿತ್ರ ಕವನ ಸಂಕಲನ ಬಿಡುಗಡೆ
ಸವಣೂರ: ಸವಣೂರಿನ ನೆಲದಲ್ಲಿ ಸಾಹಿತ್ಯದ ಕಂಪು ಸದಾ ಹರಡುತ್ತಿದೆ. ಯುವ ಜನತೆ ಚಿನ್ನು ಎಸ್. ರಾಗಿ ಅವರಂತೆ ಸರಳತೆಯನ್ನು ಮೈಗೂಡಿಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದಲ್ಲಿ ಮತ್ತೊಮ್ಮೆ ಸವಣೂರನ್ನು ಡಾ. ವಿ.ಕೃ. ಗೋಕಾರರಂತೆ ವಿಶ್ವ ವಿಖ್ಯಾತಗೊಳಿಸಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಯುವ ಸಾಹಿತಿ ಚಿನ್ನು ಎಸ್. ರಾಗಿ ರಚಿತ ಅಕ್ಷರ ಕಾವ್ಯಚಿತ್ರ ಕವನ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೆಲ ಕವನ ಬರೆದು ಪುಸ್ತಕ ಬಿಡುಗಡೆಗೊಳಿಸಿದರೆ ಸಾಹಿತಿ, ಕವಿ ಆಗಲು ಸಾಧ್ಯವಿಲ್ಲ. ಸದಾ ಸರಳತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಸ್ಫೂರ್ತಿಯಿಂದ ಮಾರ್ಗದರ್ಶಕರಾಗಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸವಣೂರಿಗೆ ನನಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆ. ಚಿನ್ನು ಅವರ 6ನೇ ಕವನ ಸಂಕಲನ ಬಿಡುಗಡೆಗೊಂಡಿರುವುದು ಸಂತಸ ತಂದಿದೆ. ಸಾಹಿತ್ಯ ರಚನೆ ನಿಂತ ನೀರಾಗುವ ಬದಲಾಗಿ ನಿರಂತರ ಕಾರ್ಯಯುಕ್ತವಾಗಬೇಕು ಎಂದರು.
ಧಾರವಾಡ ಯುವರತ್ನ ಅಕಾಡೆಮಿ ಸಂಸ್ಥಾಪಕ ಬಸವರಾಜ ಜೆನಕಟ್ಟಿ, 89 ರಕ್ತದಾನ ಕೈಗೊಂಡಿರುವ ಅಕ್ಕಿಆಲೂರಿನ ಆರಕ್ಷಕ ಪೇದೆ ಕರಬಸಪ್ಪ ಗೊಂದಿ, ಬಂಕಾಪೂರ ವಿನೋದಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಪ್ರಾಚಾರ್ಯ ಸುಭಾಸ ಮಲ್ಲಾಡದ ಹಾಗೂ ಕನ್ನಡಿಗ ಸರತಾಜ್ ಕಿಲ್ಲೇದಾರ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ರವಿಕುಮಾರ ಕೊರವರ ಸಮಾರಂಭ ಉದ್ಘಾಟಿಸಿದರು. ಸಾಹಿತಿ ಲತಾ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿನ್ನು ಎಸ್. ರಾಗಿ ದಂಪತಿಯನ್ನು ಹಿರಿಯ ಸಾಹಿತಿಗಳು ಸನ್ಮಾನಿಸಿದರು. ಸಾಹಿತಿಗಳಾದ ಡಾ. ರಾಜಶೇಖರ ಡೊಂಬರಮತ್ತೂರ, ಡಾ. ಮಹಾಂತೇಶ ಕುತನಿ, ಅಕ್ಕಿಆಲೂರ ದುಂಡಿಬಸವೇಶ್ವರ ಜಾನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ, ಕಸಾಪ ತಾಲೂಕಾಧ್ಯಕ್ಷ ಚಂದ್ರಗೌಡ ಪಾಟೀಲ ಇತರರಿದ್ದರು. ವಾಗ್ಮಿ ಕಿರಣ ವಿವೇಕವಂಶಿ, ಪ್ರಿಯಾಂಕ ಹಾವೇರಿ, ಸುನಂದಾ ಚಿನ್ನಾಪೂರ ಹಾಗೂ ಪುಷ್ಪಾ ಬತ್ತಿ ಕಾರ್ಯಕ್ರಮ ನಿರ್ವಹಿಸಿದರು.