ಹಾನಗಲ್ಲ ತಾಲೂಕಿನ ಶೇಷಗಿರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ರಂಗ ಕಲಾವಿದರನ್ನು ಸನ್ಮಾನಿಸಲಾಯಿತು. ಎಸ್.ಎಸ್. ಮೂರಮಟ್ಟಿ, ಡಾ.ಎಂ.ಪ್ರಸನ್ನಕುಮಾರ, ಸಂತೋಷ ಸಂಕೊಳ್ಳಿ ಇತರರಿದ್ದರು. 
ಹಾವೇರಿ

ರಂಗ ಕಲೆ ಉಳಿಸಿ, ಬೆಳೆಸಲಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ರಂಗ ಕಲೆ ಉಳಿಸಿ, ಬೆಳೆಸಲು ಯುವ ಪೀಳಿಗೆ ಮುಂದೆ ಬರಬೇಕಾದ ಅಗತ್ಯವಿದೆ. ಕಲಾವಿದರನ್ನು ಗುರುತಿಸಿ ಗೌರವಿಸುವ ಅಗತ್ಯವೂ ಇದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಎಸ್.ಎಸ್. ಮೂರಮಟ್ಟಿ ಹೇಳಿದರು.
ತಾಲೂಕಿನ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳ ಶೇಷಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವರಂಗಭೂಮಿ ದಿನಾಚರಣೆ ಹಾಗೂ ಇದರಂಗವಾಗಿ ನಾಲ್ವರು ಕಲಾವಿದರಿಗೆ ರಂಗ ಸನ್ಮಾನ, ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯಲ್ಲಿ ನಾವು-ನೀವು ವಿಷಯದ ಕುರಿತು ಮಾತನಾಡಿದ ಯುವ ರಂಗ ನಿರ್ದೇಶಕ ಸಂತೋಷ ಸಂಕೊಳ್ಳಿ, ನಟ-ಪ್ರೇಕ್ಷಕ ಇದ್ದರೆ ಮಾತ್ರ ನಾಟಕ ಉಳಿಯುತ್ತದೆ. ರಂಗ ಕಲೆ ಅಭಿವ್ಯಕ್ತಿ ಸಮಾಜದ ಕೈಗನ್ನಡಿ. ಬದುಕಿನ ವಿಜ್ಞಾನ ಗಣಿತದಷ್ಟೇ ರಂಗಕಲೆಯೂ ಅತ್ಯಾವಶ್ಯಕ. ಮುಖವಾಡ ಕಳಚಿ ಯೋಚಿಸಿದರೆ ಮಾತ್ರ ಸಮಾಜ ಚನ್ನಾಗಿ ಕಾಣಬಲ್ಲದು. ಅದಕ್ಕಾಗಿ ರಂಗ ಕಲೆಯೇ ಅತ್ಯುತ್ತಮ ಸಾಧನ. ನಾವು ಕೂಡ ಬದುಕಿನ ನಾಟಕದಲ್ಲಿ ಒಳ್ಳೆಯ ಪಾತ್ರಧಾರಿಗಳಾಗೋಣ ಎಂದರು.
ಮುಖ್ಯ ಅತಿಥಿಯಾಗಿ ಡಾ.ಎಂ.ಪ್ರಸನ್ನಕುಮಾರ ಆಗಮಿಸಿದ್ದರು. ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ ಆಶಯ ನುಡಿ ನುಡಿದರು. ಸಾಹಿತಿ ಮಾರುತಿ ಶಿಡ್ಲಾಪೂರ, ಕಾಂತಪ್ಪ ಹಿತ್ತಲಮನಿ, ಶಂಭು ಬಣಕಾರ, ಸಿದ್ದಪ್ಪ ಅಂಬಿಗೇರ, ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆಯ ಸಂಸ್ಥಾಪಕಿ ತುಳಸಮ್ಮ ಕೆಲೂರ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಕೊಂಚಿಗೇರಿ ರಂಗಕರ್ಮಿ ಅಶೋಕ ಬಡಿಗೇರ, ಹಾನಗಲ್ಲ ತಾಲೂಕು ಕಲಕೇರಿಯ ದೊಡ್ಡಾಟ ಕಲಾವಿದ ನಾಗರಾಜ ಪೂಜಾರ, ಉಡುಪಿಯ ರಂಗ ನಟಿ, ನಿರ್ದೇಶಕಿ ರೇವತಿರಾಮ ಕುಂದನಾಡು, ನದಿನೀರಲಗಿಯ ಯುವ ಕಲಾವಿದ ಸೋಮಣ್ಣ ಡಂಬರಮತ್ತೂರ ಅವರಿಗೆ ರಂಗ ಸಮ್ಮಾನ ನೀಡಲಾಯಿತು.
ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳು ಪ್ರಾರ್ಥನೆ ಹಾಡಿದರು. ಜಮೀರ ಪಠಾಣ ಸ್ವಾಗತಿಸಿದರು. ಸಿದ್ದಪ್ಪ ಕೊಂಡೋಜಿ ಕಾರ್ಯಕ್ರಮ ನಿರೂಪಿಸಿದರು. ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳಿಂದ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.