ಬ್ಯಾಡಗಿಯ ಪುರಸಭೆ ಎದುರು ನೂರಾರು ಬಡವರು ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.  
ಹಾವೇರಿ

title deeds poor ಬ್ಯಾಡಗಿಯಲ್ಲಿ ಬಡವರಿಗೆ ಹಕ್ಕುಪತ್ರ ನೀಡಲು ಮಹಿಳೆಯರ ಪಟ್ಟು

ಬ್ಯಾಡಗಿ ಪುರಸಭೆ ಎದುರು ಮಹಿಳೆಯರ ಪ್ರತಿಭಟನೆ | ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ಒತ್ತಾಯ
ಬ್ಯಾಡಗಿ: ಉಳ್ಳವರಿಗೆ ಮನೆ ಹಾಗೂ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಅರ್ಹ ಬಡವರಿಗೆ (title deeds poor) ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ನೂರಾರು ಮಹಿಳೆಯರು ಪಟ್ಟಣದ ಪುರಸಭೆ ಎದುರು ಮಂಗಳವಾರ ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಕಳೆದ 15 ವರ್ಷಗಳಿಂದ ನಾವು ಅರ್ಜಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ, ಈವರೆಗೂ ನಮಗೆ ನಿವೇಶನಗಳು ಸಿಗುತ್ತಿಲ್ಲ. ನಮ್ಮಿಂದ ಹಣ ತುಂಬಿಸಿಕೊಂಡರೂ ನಮ್ಮ ಹೆಸರು ಪಟ್ಟಿಯಲ್ಲಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವರಿಗೆ ಮನೆಯಿದ್ದರೂ ಹಕ್ಕುಪತ್ರ ವಿತರಿಸುವ ಪುನಃ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿವೆ.
ಈ ಹಿಂದೆ ಕೆಲವರು ನಿವೇಶನ ಪಡೆದು ಮಾರಾಟ ಮಾಡಿ ಪುನಃ ಅರ್ಜಿ ಹಾಕಿ ಮನೆ ಪಡೆದಿದ್ದಾರೆ. ಬೇರೆ ಊರಿನವರಿಗೂ ಹಕ್ಕುಪತ್ರ ನೀಡಲಾಗಿದೆ ಎಂದು ಆರೋಪಿಸಿದ ಮಹಿಳೆಯರು, ನಮ್ಮ ಹೆಸರು 814 ಫಲಾನುಭವಿ ಪಟ್ಟಿಯಲ್ಲಿದ್ದವು. ಈ ಬಾರಿ ಎಲ್ಲಿ ಹೋದವು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಾವು ಯಾರಿಗೂ ಹಕ್ಕುಪತ್ರ ಕೊಡಬೇಡಿ, ಅವರ ಹಕ್ಕುಪತ್ರ ವಾಪಸ್ ಪಡೆಯಿರಿ ಎನ್ನುವ ವಾದ ಮಾಡುತ್ತಿಲ್ಲ. ಆಶ್ರಯ ಸಮಿತಿ ಹಾಗೂ ಪುರಸಭೆಯವರು ಅರ್ಹರಿಗೆ ನಿವೇಶನ ಕೊಟ್ಟಲ್ಲಿ ನಮ್ಮ ತಕರಾರಿಲ್ಲ. ನೈಜ ಕಡುಬಡವರಿಗೆ ನ್ಯಾಯ ಸಿಗಬೇಕು. ಅರ್ಹರನ್ನು ಗುರುತಿಸಿ ನಿವೇಶನ ಕೊಡಬೇಕು. ಎರಡನೇ ಪಟ್ಟಿಯಲ್ಲಿ ನಮ್ಮ ಹೆಸರು ಬರುವುದನ್ನು ಹೇಗೆ ನಂಬಬೇಕು ಎಂದು ಪ್ರಶ್ನಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಶೆಟ್ಟರ್, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಸರೋಜಾ ಉಳ್ಳಾಗಡ್ಡಿ, ಶಿವರಾಜ ಅಂಗಡಿ, ವಿನಯಕುಮಾರ ಹಿರೇಮಠ, ಹನುಮಂತಪ್ಪ ಮ್ಯಾಗೇರಿ, ಗಾಯತ್ರಿ ರಾಯ್ಕರ, ಮಂಜುನಾಥ ರ್ಬಾ, ಮಂಗಳಾ ಗೆಜ್ಜೆಹಳ್ಳಿ, ಶಂಕರ ಕುಸಗೂರು, ಜಮೀಲಾ ಹರಕಲ್ಲ, ಫಕೀರವ್ವ ಚಲವಾದಿ, ರೇಷ್ಮಾ ಎಸ್., ಮಲ್ಲವ್ವ ಪಾಟೀಲ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ ಇದ್ದರು.
ಸಾಮಾನ್ಯ ಸಭೆಯಲ್ಲಿಯೂ ಮನೆ ಗದ್ದಲ: ಪುರಸಭೆ ಅವಧಿ ನ. 6ರಂದು ಕೊನೆಗೊಳ್ಳಲಿರುವ ಕಾರಣ ಬಹುತೇಕ ಸದಸ್ಯರು ತಮ್ಮ ವಾರ್ಡ್​ಗಳ ಸಮಸ್ಯೆಗೆ ಪರಿಹಾರ, ಕಾಮಗಾರಿ ಇತ್ಯಾದಿ ಹಲವು ವಿಷಯಗಳ ರ್ಚಚಿಸಲು ಆಗಮಿಸಿದ್ದರು. ಆದರೆ, ಮಹಿಳೆಯರು ಸಭಾಂಗಣದ ಹೊರಭಾಗದಲ್ಲಿ ಗದ್ದಲದ ವಾತಾವರಣ ಉಂಟು ಮಾಡಿದ ಪರಿಣಾಮ ಸಾಕಷ್ಟು ತೊಂದರೆಯಾಯಿತು. 
ಕೆಲ ಹೊತ್ತಿನ ಬಳಿಕ ಎಲ್ಲ ಸದಸ್ಯರು, ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕೆಲವರು ಸಭೆಯಲ್ಲಿ ರದ್ದುಪಡಿಸುವ ಠರಾವು ಬರೆಯುವಂತೆ ಒತ್ತಾಯಿಸಿದರು. ಬಳಿಕ ಸದಸ್ಯರು ಸಭಾಭವನಕ್ಕೆ ಆಗಮಿಸಿ ರ್ಚಚಿಸಿದರು.
ಕಚೇರಿಗೆ ಪೊಲೀಸ್ ಸರ್ಪಗಾವಲು: ನ. 3ರಂದು ವಸತಿ ಸಚಿವರು ನಿವೇಶನ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿದ್ದರು. ಮರುದಿನವೇ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದು ಬಡ ಮಹಿಳೆಯರು ಏಕಾಏಕಿ ಪುರಸಭೆ ಆವರಣದಲ್ಲಿ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪೊಲೀಸ್ ಭದ್ರತೆಯಲ್ಲಿ ಸಭೆ ನಡೆಸುವಂತಾಯಿತು.
"

ಹಕ್ಕುಪತ್ರ ನೀಡುವ ಮುನ್ನ ಚರ್ಚೆ ಮಾಡಬೇಕಿದ್ದು, ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಸದಸ್ಯರು ಸಾಕಷ್ಟು ಸೂಚನೆ ನೀಡಿದ್ದಾರೆ. ಸದಸ್ಯರಿಗೂ ತಮ್ಮ ವಾರ್ಡ್​ನಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರು ತಿಳಿದಿಲ್ಲ. ಅಲ್ಲದೆ, ಸದಸ್ಯರು ಸೂಚಿಸಿದ ಅರ್ಹರಿಗೂ ನಿವೇಶನ ಸಿಕ್ಕಿಲ್ಲವೆನ್ನುವ ಆರೋಪವಿದೆ. ಕೂಡಲೇ ಆಶ್ರಯ ಸಮಿತಿ ಸದಸ್ಯರು, ಶಾಸಕರು ಪುನಃ ಸಭೆ ಕರೆದು ನ್ಯಾಯ ಒದಗಿಸಬೇಕು.

| ಬಸವರಾಜ ಛತ್ರದ, ಪುರಸಭೆ ಸದಸ್ಯ.

"

ಆಶ್ರಯ ಸಮಿತಿ ಸದಸ್ಯರು ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಣಯಿಸಿದ್ದಾರೆ. ನನ್ನ ವಾರ್ಡ್ ಸೇರಿದಂತೆ ಬಹುತೇಕ ಸದಸ್ಯರ ವಾರ್ಡ್​ನಲ್ಲಿ ಅರ್ಹರನ್ನು ಕೈಬಿಟ್ಟು ಅನರ್ಹರ ಆಯ್ಕೆ ನಡೆದಿದೆ. ಇದಕ್ಕೆ ದಾಖಲೆ ನೀಡಲು ಸಿದ್ಧ. ನ್ಯಾಯ ಸಿಗದಿದ್ದಲ್ಲಿ ಎರಡು ದಿನಗಳ ಬಳಿಕ ನಿವಾಸಿಗಳ ಜತೆ ಹೋರಾಟ ನಡೆಸುವೆ. ಶಾಸಕರು, ಅಧಿಕಾರಿಗಳು ಕೂಡಲೇ ಅನರ್ಹರ ಹೆಸರು ಕೈಬಿಡಬೇಕು. ಸದಸ್ಯರ ವಿಶ್ವಾಸ ಪಡೆದು ನ್ಯಾಯ ಒದಗಿಸಬೇಕು.

| ಸುಭಾಸ ಮಾಳಗಿ, ಪುರಸಭೆ ಉಪಾಧ್ಯಕ್ಷ.

"

ನಾವು ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಆಶ್ರಯ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಪುರಸಭೆ ಸದಸ್ಯರ ಗಮನಕ್ಕೂ ತಂದು ಫಲಾನುಭವಿ ಪಟ್ಟಿ ಸಿದ್ಧಪಡಿಸಲಾಗಿದೆ. ಆದಾಗ್ಯೂ ಪಟ್ಟಿಯಲ್ಲಿ ಕೆಲ ಅನರ್ಹರಿದ್ದಾರೆ ಎನ್ನುವ ಕುರಿತು ಆರೋಪ ಕೇಳಿಬಂದಿದೆ. ಅನರ್ಹರ ಕುರಿತು ದಾಖಲೆಗಳಿದ್ದಲ್ಲಿ ಪರಿಶೀಲಿಸುತ್ತೇನೆ. ಸದಸ್ಯರ ಸಹಕಾರ ಪಡೆದು ಮತ್ತೊಮ್ಮೆ ಸಭೆ ನಡೆಸಿ, ಅನರ್ಹರನ್ನು ಪಟ್ಟಿ ಕೈಬಿಡಲಾಗುವುದು.

| ವಿನಯಕುಮಾರ ಹೊಳೆಪ್ಪಗೋಳ, ಪುರಸಭೆ ಮುಖ್ಯಾಧಿಕಾರಿ.