ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ಕಾಣಿಸಿಕೊಂಡ ಜೋಡಿ ಕಾಡುಕೋಣ (wild buffaloes).
ಹಾನಗಲ್ಲ: ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ಜೋಡಿ ಕಾಡುಕೋಣಗಳು (wild buffaloes) ಕಾಣಿಸಿಕೊಂಡಿವೆ. ಗ್ರಾಮದ ಮನೆಗಳ ಬಳಿ ಹಾಕಿದ ಸಿಸಿ ಕ್ಯಾಮರಾದಲ್ಲಿ ಕಾಡುಕೋಣಗಳು ಒಡಾಡುವ ದೃಶ್ಯ ಸೆರೆಯಾಗಿದೆ.
ಗ್ರಾಮದ ಬಳಿಯ ಹೊಲವೊಂದರಲ್ಲಿ ಕಂಡುಬಂದ ಕಾಡುಕೋಣಗಳನ್ನು ಶಬ್ದ ಮಾಡಿ ಗ್ರಾಮಸ್ಥರು ಓಡಿಸಿದ್ದಾರೆ. ಇದೇ ವೇಳೆ ರೈತರು ತಮ್ಮ ಮೊಬೈಲ್ನಲ್ಲಿ ಕಾಡುಕೋಣಗಳ ಚಿತ್ರಗಳನ್ನು ತೆಗೆದಿದ್ದಾರೆ. ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಕಾಡುಕೋಣಗಳ ಓಡಾಟದ ಬಗ್ಗೆ ಮಾಹಿತಿ ಕಲೆ ಹಾಕಿದರು. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಕಾಡುಕೋಣ ಪ್ರತ್ಯಕ್ಷವಾಗಿ ನೋಡಿದ ಮಾಸನಕಟ್ಟಿಯ ರೈತ ರಾಜಣ್ಣ ಹಲಸೂರ, ಕಾಡುಕೋಣಗಳು ನಮ್ಮ ಭಾಗಕ್ಕೆ ಬಂದಿರುವುದು ಇದೇ ಮೊದಲು. ಆದರೆ, ಯಾವುದೇ ಬೆಳೆ ಹಾನಿಯಾಗಿಲ್ಲ. ರಾತ್ರಿ ಸಮಯದಲ್ಲಿ ರೈತರು ಹೊಲ ಗದ್ದೆ, ತೋಟಗಳಿಗೆ ತೆರಳುತ್ತಾರೆ. ಹಾಗಾಗಿ ಜಾಗ್ರತೆ ವಹಿಸಬೇಕಾಗುತ್ತದೆ. ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿಗೆ ಪ್ರತಿಕ್ರಿಯಿಸಿದ ಆರ್ಎ್ಒ ಗಣೇಶ್ ಶೆಟ್ಟರ್, ದಾಂಡೇಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಕಾಡುಕೋಣಗಳು ಮುಂಡಗೋಡ, ಕಾತೂರು ಮಾರ್ಗವಾಗಿ ಹಾನಗಲ್ಲ ತಾಲೂಕಿಗೆ ಆಗಮಿಸುತ್ತಲೇ ಇರುತ್ತವೆ. ಆದರೆ, ಈ ಬಾರಿ ಮಾಸನಕಟ್ಟಿವರೆಗೆ ಕಾಡು ಕೋಣಗಳು ಬಂದಿರುವ ಮಾಹಿತಿ ಸಿಕ್ಕಿದೆ. ಕಾಡಾನೆಗಳೂ ಇದೇ ಮಾರ್ಗವಾಗಿ ಆಹಾರ ಅರಸುತ್ತ ಬಂದಿರುತ್ತವೆ. ನಂತರ ತಮ್ಮ ಮೂಲ ವಾಸಸ್ಥಾನಕ್ಕೆ ಮರಳುತ್ತವೆ. ಕಾಡುಕೋಣಗಳಿಗೆ ದಟ್ಟಾರಣ್ಯ ಇರಬೇಕು. ನಮ್ಮ ತಾಲೂಕು ಬಯಲು ಪ್ರದೇಶವಾದ್ದರಿಂದ ಇಲ್ಲಿ ಅವು ಉಳಿಯಲಾರವು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಕಾಡುಕೋಣದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ನಮ್ಮ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ನಿಗಾ ವಹಿಸುತ್ತಿದ್ದಾರೆ ಎಂದು ತಿಳಿಸಿದರು.