ಅನಧಿಕೃತವಾಗಿ ಎರಡೆರಡು ನಲ್ಲಿಗಳ ಕನೆಕ್ಷನ್ ಪಡೆದಿರುವವರ ಪೈಪ್‌ಲೈನ್ ತೆರವುಗೊಳಿಸುತ್ತಿರುವ ಗ್ರಾಪಂ ಸಿಬ್ಬಂದಿ.
ಹಾನಗಲ್ಲ: ಹಾನಗಲ್ಲ ತಾಲೂಕಿನ ಹಿರೇಹುಲ್ಲಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮರಿಕೊಪ್ಪ ಗ್ರಾಮದ ಮನೆಗಳಿಗೆ ಜೋಡಿಸಿದ ಜಲಜೀವನ ಮಿಷನ್ ನಳಕ್ಕೆ ಅಳವಡಿಸಿದ ಮೀಟರ್ ತಪ್ಪಿಸಿ ನಿಯಮ ಬಾಹೀರವಾಗಿ ಮನೆಗೆ ಮುಕ್ಕಾಲು ಇಂಚಿನ ನಳದ ಪೈಪ್ ಅಳವಡಿಸಿಕೊಂಡಿದ್ದಲ್ಲದೆ ಎರಡೆರಡು ನಳಗಳನ್ನು ಅನಧಿಕೃತವಾಗಿ ತಾವೇ ಜೋಡಿಸಿಕೊಂಡ ಪರಿಣಾಮ ಇನ್ನೂಳಿದ ಅರ್ಧಕ್ಕಿಂತ ಹೆಚ್ಚು ಮನೆಗಳಿಗೆ ನೀರು ತಲುಪದೆ ತೊಂದರೆ ಅನುಭವಿಸುತ್ತಿದ್ದಾರೆ.
ತಾಲೂಕಿನ ಹಿರೇಹುಲ್ಲಾಳ ಗ್ರಾಪಂನ ತುಮರಿಕೊಪ್ಪ 115 ಕುಟುಂಬಗಳ, 800 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ. ನೀರು ಸರಬರಾಜು ಮುಖ್ಯ ಪೈಪ್‌ಗೆ ಊರ ಹೊರಗೆ ಅನಧಿಕೃತವಾಗಿ ಒಂದೂವರೆ ಇಂಚಿನ ಪೈಪ್ ಅಳವಡಿಸಿಕೊಂಡು ಹಲವು ಮನೆಗಳವರು ನೀರು ಹೀರಿಕೊಳ್ಳುತ್ತಿರುವುದರಿಂದ ಊರಿನಲ್ಲಿ ನೀರಿನ ಸಮಸ್ಯೆಯಾಗಿದೆ ಎಂದು ಗ್ರಾಪಂನ ನೀರು ಸರಬರಾಜು ಸಿಬ್ಬಂದಿಗಳು ಹೇಳುತ್ತಾರೆ. ಅನಧಿಕೃತ ಪೈಪ್‌ಲೈನ್ ಅಳವಡಿಸಿದವರ ಮೇಲೆ ಯಾವುದೇ ಕಾನೂನು ಕ್ರಮವೂ ಕೈಗೊಂಡಿಲ್ಲ. ಈ ಬಗ್ಗೆ ಯಾವುದೇ ಪ್ರಶ್ನೆಯನ್ನೂ ಮಾಡದೇ ಗ್ರಾಪಂ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ. ಈ ಊರಿಗಾಗಿಯೇ 3 ಕೊಳವೆ ಬಾವಿಗಳಿವೆ. ಆದರೆ ಬಳಸುತ್ತಿರುವುದು ಒಂದೇ ಕೊಳವೆ ಬಾವಿ ಮಾತ್ರ. ಇನ್ನೆರಡು ಕೊಳವೆ ಬಾವಿಗಳನ್ನು ಬಳಸುವುದೇ ಇಲ್ಲ.
ಬದಲಾವಣೆ: ಕೆಲವು ಕಡೆಗೆ ಎರಡೆರಡು ನಳ ಅಳವಡಿಸಿಕೊಂಡಿರುವ ಹಾಗೂ ಅರ್ಧ ಇಂಚಿನ ಬದಲಾಗಿ ಮುಕ್ಕಾಲು ಇಂಚಿನ ಪೈಪ್ ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಿಬ್ಬಂದಿಗಳು ಸಾರ್ವಜನಿಕರ ತಕರಾರನ್ನೂ ಎದುರಿಸಿದ್ದಾರೆ. ಆದಾಗ್ಯೂ ಮುಕ್ಕಾಲು ಇಂಚಿನ ಪೈಪ್ ತೆಗೆದು ಹಾಕಿ ಅರ್ಧ ಇಂಚಿನ ಪೈಪ್ ಹಾಕುವ ಯತ್ನವೂ ನಡೆದಿದೆ. ಹೀಗೆ ಇಡೀ ಗ್ರಾಮದ ಎಲ್ಲ ಮನೆಗಳ ಪೈಪ್‌ಲೈನ್ ಪರಿಶೀಲಿಸಿ ದುರಸ್ತಿಗೊಳಿಸುವವರೆಗೆ ಈ ಸಮಸ್ಯೆ ಪರಿಹಾರ ಕಾಣಲಾರದು ಎನ್ನಲಾಗುತ್ತಿದೆ. ಊರ ಹೊರಗಿನ ಮುಖ್ಯ ಪೈಪ್‌ಲೈನ್‌ಗೆ ಅಳವಡಿಸಿದ ಅನಧಿಕೃತ ಒಂದೂವರೆ ಇಂಚಿನ ಪೈಪ್‌ಲೈನ್ ಕೂಡ ತೆರವುಗೊಳಿಸಲಾಗುತ್ತದೆ ಎಂದು ಕುಡಿಯುವ ನೀರು ಸರಬರಾಜು ಸಿಬ್ಬಂದಿ ತಿಳಿಸಿದ್ದಾರೆ. ಈಗಲಾದರೂ ಗ್ರಾಪಂ ಅಧಿಕಾರಿಗಳು ಎಚ್ಚೆತ್ತುಕೊಂಡು, ಕಟ್ಟುನಿಟ್ಟಿನ ಕ್ರಮ ಕೈಗೊಂಡು, ನೀರು ನಿರ್ವಹಣೆಯ ಸಮಸ್ಯೆ ಪರಿಹರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
"
ನನಗೆ ಉಪ್ಪಣಸಿ ಹಾಗೂ ಹಿರೇಹುಲ್ಲಾಳಗಳೆರಡೂ ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಇದೆ. ಈ ನಡುವೆ ತುಮರಿಕೊಪ್ಪ ಗ್ರಾಮದ ನೀರಿನ ಸಮಸ್ಯೆ ಬಗೆಗೆ ಈಗ ತಿಳಿದಿದ್ದು ಕೂಡಲೇ ಸರಿಪಡಿಸುತ್ತೇವೆ. ಅನಧಿಕೃತ ನಳ ಜೋಡಣೆ ಬಗೆಗೆ ದೂರುಗಳು ಬಂದಿದ್ದು, ತಕ್ಷಣ ಕ್ರಮ ಕೈಗೊಳ್ಳಲಾಗುವುದು.
— ಎನ್.ಈಶ್ವರಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ. ಹಿರೇಹುಲ್ಲಾಳ