ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ ಹೊರ ವಲಯದಲ್ಲಿರುವ ತೋಟದ ಮನೆಯ ಆವರಣದಲ್ಲಿ ಹೂತಿದ್ದ ಶವ ಹೊರ ತೆಗೆಯುತ್ತಿರುವುದು. ತಹಸೀಲ್ದಾರ್ ರವಿಕುಮಾರ ಕೊರವರ ಹಾಗೂ ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳದಲ್ಲಿದ್ದರು.
- ಪತಿಯ ಸಾವಿನ ಕುರಿತು ಶಂಕಿಸಿ ಪತ್ನಿ ದೂರು
- ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
- ಸವಣೂರು ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಘಟನೆ
ಸವಣೂರು: ಅವರು 27 ಎಕರೆ ಜಮೀನಿನ ಯಜಮಾನ. ಪತ್ನಿ, ಪುತ್ರ, ನಾಲ್ವರು ಪುತ್ರಿಯರಿರುವ ತುಂಬು ಕುಟುಂಬ. ಕೆಲ ದಿನಗಳ ಹಿಂದೆ ಶಿರಬಡಗಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ರಾತ್ರಿ ಮಲಗಿದ್ದ ಹಿರಿಯ ಬೆಳಗಾಗುವಷ್ಟರಲ್ಲಿ ಪ್ರಾಣಬಿಟ್ಟಿದ್ದ. ಊರವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಿದ ಬಳಿಕ ಈಗ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ‘ನನ್ನ ಪತಿಯದ್ದು ಸಹಜ ಸಾವಲ್ಲ, ಕೊಲೆ (MURDER?) ಮಾಡಿರುವ ಶಂಕೆ ಇದೆ’ ಎಂದು ಆರೋಪಿಸಿ ಪತ್ನಿ ಠಾಣೆಯ ಮೆಟ್ಟಿಲೇರಿದ್ದಾಳೆ. ಪರಿಣಾಮವಾಗಿ ಪೊಲೀಸರು ಮೃತದೇಹವನ್ನು ಬುಧವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು.
ಶಿರಬಡಗಿ ಗ್ರಾಮದ ಗುರುಬಸಪ್ಪ ಯಲ್ಲಪ್ಪ ಬಸಾಪುರ (75) ಜೂ. 15ರಂದು ತಮ್ಮ ತೋಟದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅಂದೇ ಕುಟುಂಬಸ್ಥರು, ಗ್ರಾಮಸ್ಥರು ತಮ್ಮ ತೋಟದಲ್ಲಿಯೇ ಅಂತ್ಯಸಂಸ್ಕಾರ ಕೈಗೊಂಡಿದ್ದರು.
ನಂತರ, ಸಾವಿನಲ್ಲಿ ಅನುಮಾನ ಇರುವುದಾಗಿ ಪತ್ನಿ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ. ಪ್ರಥಮ ಹಂತದಲ್ಲಿ, ಹೂತಿರುವ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕಾರ, ತಹಸೀಲ್ದಾರ್ ರವಿ ಕೊರವರ ಸಮ್ಮುಖದಲ್ಲಿ ಮೃತದೇಹ ಹೊರಗೆ ತೆಗೆಯಲಾಯಿತು. ವೈದ್ಯರ ಸಹಾಯದಿಂದ ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ, ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಗುರುಬಸಪ್ಪ ಅವರಿಗೆ ಪುತ್ರ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಪುತ್ರ ರವಿ ಬಸಾಪುರ ಹಾಗೂ ಸಹೋದರಿಯರಾದ ರೇಖಾ, ಸುಜಾತಾ, ಗಿರಿಜಾ ಮತ್ತು ಪಾರ್ವತಿ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿವೆ. ಗುರುಬಸಪ್ಪ ಅವರ ಹೆಸರಿನಲ್ಲಿ 27 ಎಕರೆ ಜಮೀನಿದೆ. ಇತ್ತೀಚೆಗೆ ಅವರು, ತಮ್ಮ ಹೆಣ್ಣುಮಕ್ಕಳಿಗೂ ಆಸ್ತಿ ಹಂಚಿಕೆ ಮಾಡಿದ್ದರಿಂದ ಕುಟುಂಬದಲ್ಲಿ ಕಲಹ ಆರಂಭಗೊಂಡು, ತಂದೆಯ ನಿರ್ಧಾರದಿಂದ ಹಿರಿಯ ಪುತ್ರ ರವಿ ಬಸಾಪುರ ಅಸಮಾಧಾನಗೊಂಡಿದ್ದರು ಎನ್ನುವುದು ಸಹೋದರಿಯರ ಆರೋಪವಾಗಿದೆ. ಆಸ್ತಿ ಹಂಚಿಕೆ ಕಾರಣಕ್ಕೆ ರವಿ ಅವರೇ ತಂದೆಯನ್ನು ಕೊಲೆ ಮಾಡಿರುವ ಶಂಕೆ ಇದೆ. ಆರೋಪ ತಳ್ಳಿಹಾಕುತ್ತಿರುವ ರವಿ, ‘ಸಹೋದರಿಯರೇ ಆಸ್ತಿಗಾಗಿ ತಂದೆಯನ್ನು ಕೊಲೆ ಮಾಡಿ ನನ್ನ ಮೇಲೆ ಆರೋಪ ಬರುವಂತೆ ನಟಿಸುತ್ತಿದ್ದಾರೆ’ ಎಂಬುದಾಗಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ತೋಟದ ಮನೆಯಲ್ಲಿ ಸಾವು:
ಕೃಷಿ ಮಾಡುತ್ತಿದ್ದ ಪತಿ ಗುರುಬಸಪ್ಪ ಪ್ರತಿದಿನ ರಾತ್ರಿ ಮಲಗಲು ತೋಟದ ಮನೆಗೆ ಹೋಗುತ್ತಿದ್ದರು. ಜೂ. 15ರಂದು ರಾತ್ರಿ ತೋಟದ ಮನೆಗೆ ಹೋಗಿದ್ದರು. ಮರುದಿನ ಮನೆಗೆ ವಾಪಸ್ ಬಂದಿರಲಿಲ್ಲ. ತೋಟದ ಮನೆಗೆ ಹೋಗಿ ನೋಡಿದಾಗ ಮೃತಪಟ್ಟಿದ್ದು ಗೊತ್ತಾಗಿತ್ತು ಎಂದು ಪತ್ನಿ ರುದ್ರವ್ವ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶವವನ್ನು ಮನೆಗೆ ತಂದು, ಗ್ರಾಮಸ್ಥರ ಸಮ್ಮುಖದಲ್ಲಿ ತೋಟದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಶವ ಹೂಳುವ ಸಂದರ್ಭದಲ್ಲಿ ಕುಣಿಯಲ್ಲಿ ಸುಣ್ಣ ಹಾಕಿದ್ದರು. ಇದರಿಂದ ನನ್ನ ಗಂಡನ ಸಾವಿನ ಬಗ್ಗೆ ಸಂಶಯ ಬಂದಿತ್ತು. ಹೆಣ್ಣು ಮಕ್ಕಳ ಜತೆ ಚರ್ಚಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ’ ಎಂದು ರುದ್ರವ್ವ ದೂರಿನಲ್ಲಿ ತಿಳಿಸಿದ್ದಾರೆ.