ಹಿರೇಕೆರೂರಿನ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತೆಯ ಡಯಾಲಿಸಿಸ್ ಕೇಂದ್ರಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ಮಲ್ಲಿಕಾರ್ಜುನ ಬುರಡಿಕಟ್ಟಿ, ಸುರೇಶ ತಳವಾರ, ಡಾ.ಝಡ್.ಆರ್. ಮಕಾಂದಾರ, ಮುನ್ನಾ ಅಪರಂಜಿ ಇತರರಿದ್ದರು. 
ಹಾವೇರಿ

ರೋಗಿಗೆ ಉತ್ತಮ ಸೇವೆ ನೀಡಲಿ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಹಿರೇಕೆರೂರ
ಪಟ್ಟಣ ಸೇರಿದಂತೆ ತಾಲೂಕಿನ ಡಯಾಲಿಸಿಸ್ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಸೇವೆ, ಚಿಕಿತ್ಸೆ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಶನಿವಾರ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ನಂತರ ಅವರು ಮಾತನಾಡಿದರು.
ಈ ಮೊದಲು ಹಿರೇಕೆರೂರ 2 ಮತ್ತು ರಟ್ಟಿಹಳ್ಳಿ ಆಸ್ಪತ್ರೆಗಳಲ್ಲಿ 2 ಡಯಾಲಿಸಿಸ್ ಯಂತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದ ರೋಗಿಗಳು ಅನಿವಾರ್ಯವಾಗಿ ಹಾವೇರಿಗೆ ಹೋಗಿ, ಅಲ್ಲಿ ಸರದಿಯಂತೆ ಡಯಾಲಿಸಿಸ್ ಮಾಡಿಸಿಕೊಂಡು ಬರಬೇಕಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಬಂದಿದ್ದರಿಂದ ಬೆಳಗಾವಿಯ ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿತ್ತು. ಅದರಂತೆ ಸಚಿವ ದಿನೇಶ ಗುಂಡೂರಾವ್ ಹಿರೇಕೆರೂರಿಗೆ 2 ಹಾಗೂ ರಟ್ಟಿಹಳ್ಳಿ ಆಸ್ಪತ್ರೆಗೆ 2 4 ಹೊಸ ಡಯಾಲಿಸಿಸ್ ಯಂತ್ರ ಮಂಜೂರು ಮಾಡಿದ್ದಾರೆ. ಅವಶ್ಯಕತೆಯಿದ್ದಲ್ಲಿ ಇನ್ನು ಹೆಚ್ಚಿನ ಯಂತ್ರ ನೀಡುವ ಭರವಸೆ ನೀಡಿದ್ದಾರೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದಾರ ಮಾತನಾಡಿ, ಈ ಮೊದಲು ಹಿರೇಕೆರೂರ ಹಾಗೂ ರಟ್ಟಿಹಳ್ಳಿಯ ಆಸ್ಪತ್ರೆಗಳಲ್ಲಿ 1 ಯಂತ್ರಕ್ಕೆ ದಿನಕ್ಕೆ 4 ಸಿಫ್ಟ್‌ನಂತೆ 2 ಡಯಾಲಿಸಿಸ್ ಯಂತ್ರಗಳಿಂದ ಕೇವಲ 8 ರೋಗಿಗಳಿಗೆ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿತ್ತು. ಶಾಸಕರ ಪ್ರಯತ್ನದಿಂದ ಈಗ ಮತ್ತೆ ಒಟ್ಟು 4 ಯಂತ್ರ ಹೊಸದಾಗಿ ಮಂಜೂರಾಗಿದ್ದು, ಇದರಿಂದ ಭಾನುವಾರ ರಜಾ ದಿನ ಹೊರತುಪಡಿಸಿ ಇನ್ಮುಂದೆ ಹಿರೇಕೆರೂರಿನಲ್ಲಿ 16 ಮತ್ತು ರಟ್ಟಿಹಳ್ಳಿಯಲ್ಲಿ 16 ಹೀಗೆ ದಿನಕ್ಕೆ ಒಟ್ಟು 32 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದಾಗಿದೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಸುರೇಶ ತಳವಾರ, ಮುನ್ನಾ ಅಪರಂಜಿ ಇತರರಿದ್ದರು.