ಬಂಕಾಪುರ: ವರದಾ ನದಿ (varada river) ತುಂಬಿ ಹರಿಯುತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳಲು ಮುಂದಾಗದ ಶಿಗ್ಗಾಂವ ಏತ ನೀರಾವರಿ ಯೋಜನೆ ಅಧಿಕಾರಿ ಗಳು, ಬರಮುಕ್ತ ತಾಲೂಕನ್ನಾಗಿಸುವ ಯೋಜನೆ ಮರೆತಿದ್ದಾರೆ.
ಮುಂಗಾರು ಆರಂಭಗೊಂಡು ಎರಡು ತಿಂಗಳಾಗುತ್ತ ಬಂದರೂ ಈ ಭಾಗದಲ್ಲಿ ಕೆರೆ, ಕಟ್ಟೆಗಳು ತುಂಬಿಲ್ಲ. ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಇದು ಹೀಗೆಯೇ ಮುಂದುವರೆದರೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಜತೆಗೆ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯಲಿದೆ. ಇದರಿಂದ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ ಎಂಬ ಆತಂಕದಲ್ಲಿರುವ ರೈತರು ಕೆರೆಗಳಿಗೆ ನೀರು ಹರಿಸುವಂತೆ ಪ್ರತಿದಿನ ಜಾಕ್ವೆಲ್ ಹೋಗಿ ಅಲ್ಲಿರುವ ಸಿಬ್ಬಂದಿಗೆ ಮನವಿ ಮಾಡುವುದು ಸಾಮಾನ್ಯವಾಗಿದೆ.
ಸಂಸದ ಬಸವರಾಜ ಬೊಮ್ಮಾಯಿ ಅವರು, ಶಿಗ್ಗಾಂವ, ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ 2013ರಲ್ಲಿ ಜಾರಿಗೊಳಿಸಿರುವ ಮಹತ್ವಾಕಾಂೆಯ ಶಿಗ್ಗಾಂವ ಏತ ನೀರಾವರಿ ಯೋಜನೆ ಈಗ ಅಧಿಕಾರಿಗಳ ಮತ್ತು ಉಸ್ತುವಾರಿ ಕಂಪನಿಯ ನಿರ್ಲಕ್ಷ$್ಯದಿಂದ ಹಿನ್ನಡೆಯಾಗಿದೆ. ಸದ್ಯ ಬಂಕಾಪುರ ಮತ್ತು ಶಿಗ್ಗಾಂವ ಪಟ್ಟಣಕ್ಕೆ ಕುಡಿಯಲು ಮಾತ್ರ ನೀರು ಪೂರೈಸಲಾಗುತ್ತಿದೆ. ಆದರೆ, ಕೆರೆ ತುಂಬಿಸಲು ಮುಂದಾಗುತ್ತಿಲ್ಲ ಎಂಬುದು ರೈತರ ಆರೋಪ.
ನದಿಯಿಂದ 180 ಅಡಿ ಉದ್ದದ ಕಾಲುವೆಗೆ ನೀರು ಹರಿಸಿ ಅಲ್ಲಿಂದ 2654 ಎಚ್.ಪಿ ಸಾಮರ್ಥ್ಯದ ನಾಲ್ಕು ಪಂಪ್ಗಳ ಮೂಲಕ ನೀರೆತ್ತಿ ಓವರ ಹೆಡ್ ಟ್ಯಾಂಕ್ಗೆ ಸಂಗ್ರಹಿಸಿ ಅಲ್ಲಿಂದ ಡಿಸಿ ಛೇಂಬರ್ಗಳಿಗೆ ಹರಿಸುವ ಈ ಯೋಜನೆ ನೀರಾವರಿ ಸೌಲಭ್ಯ ಮಾತ್ರವಲ್ಲದೆ, ಒಟ್ಟು 119 ಸಂಪುಗಳಿಗೆ ಮತ್ತು ಹೋತನಹಳ್ಳಿ 6, ಚಂದಾಪುರ 13, ತಡಸ ಭಾಗದ 23 ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ.
ಯೋಜನೆ ವಿವರ: ಸವಣೂರ ತಾಲೂಕಿನ ಹಲಸೂರ ಬಳಿ ವರದಾ ನದಿ ದಂಡೆಯಲ್ಲಿ ಒಟ್ಟು 87.71 ಕೋಟಿ ರೂ. ವೆಚ್ಚದಲ್ಲಿ ಶಿಗ್ಗಾಂವ ಏತ ನೀರಾವರಿ ಯೋಜನೆ ಕಾರ್ಯಗತಗೊಂಡಿದೆ. ಯೋಜನೆಯಿಂದ ಒಟ್ಟು 1.35 ಟಿಎಂಸಿ ನೀರಿನ ಬಳಕೆ ಮಾಡಲಾಗುತ್ತಿದೆ. ಇಲ್ಲಿಂದ ಪೈಪ್ಲೈನ್ ಮೂಲಕ ನೀರಾವರಿ ಯೋಜನೆಯ ೇತ್ರ ವ್ಯಾಪ್ತಿಯಲ್ಲಿ ನಿಮಿರ್ಸಿರುವ 6 ಬೃಹತ್ ನೀರು ಸಂಗ್ರಹಣಾ ತೊಟ್ಟಿಗಳಲ್ಲಿ (ಡಿಲೇವರಿ ಛೇಂಬರ್) ನೀರು ಸಂಗ್ರಹಿಸಿ ಅಲ್ಲಿಂದ ಮತ್ತೆ ಪೈಪ್ಲೈನ್ ಮೂಲಕ 85 ಹೆಕ್ಟೇರ್ ಪ್ರದೇಶಕ್ಕೊಂದರಂತೆ ನಿಮಿರ್ಸಿರುವ ರೈತರ ಜಮೀನುಗಳಲ್ಲಿನ 119 ಸಂಪುಗಳಿಗೆ ನೀರು ಪೂರೈಸುವುದು ಮತ್ತು ತಾಲೂಕಿನ 49 ಕೆರೆಗಳಿಗೆ ನೀರು ತುಂಬಿಸುವುದು ಯೋಜನೆಯ ಉದ್ದೇಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನದಿಯಲ್ಲಿ ನೀರು ಇರುವಾಗಲೇ ಎಲ್ಲ ಕೆರೆಗಳಿಗೆ ಹರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.