ಬಂಕಾಪುರ: ಸಾಲಬಾಧೆಯಿಂದ ನೊಂದು ತಾಲೂಕಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ರೈತ ನೇಣಿಗೆ ಶರಣಾದರೆ ಮತ್ತೊಬ್ಬ ರೈತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅತಿವೃಷ್ಟಿಯಿಂದ ಗೋವಿನಜೋಳ ಬೆಳೆ ಹಾನಿ, ಅಳಿದುಳಿದ ಬೆಳೆಗೆ ಸಿಗದ ಸಮರ್ಪಕ ಬೆಲೆಯಿಂದಾಗಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಮನನೊಂದು ಮಲ್ಲನಾಯಕನಕೊಪ್ಪ ಗ್ರಾಮದ ರೈತ ಯಲ್ಲಪ್ಪ ಹನುಮಂತಪ್ಪ ಅಗಸಿಮನಿ (55) ಹೊಲದಲ್ಲಿ ವಿಷ ಕುಡಿದು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ಎಕರೆಯಷ್ಟು ಬೆಳೆಯಲಾಗಿತ್ತು. ಆರಂಭದಲ್ಲಿ ಅತಿವೃಷ್ಟಿಗೆ ಒಂದಿಷ್ಟು ಬೆಳೆ ಹಾಳಾಗಿತ್ತು. ಉಳಿದ ಬೆಳೆಗೂ ಸಮರ್ಪಕ ಬೆಲೆ ಸಿಗಲಿಲ್ಲ ಎನ್ನಲಾಗಿದೆ. ಶಿಗ್ಗಾಂವಿ ಫೈನಾನ್ಸ್‌ನಲ್ಲಿ 7.5 ಲಕ್ಷ ರೂ., ಹಾವೇರಿಯ ಫೈನಾನ್ಸ್‌ವೊಂದರಲ್ಲಿ 2ಲಕ್ಷ ರೂ., ಕೋಣನಕೇರಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1.5 ಲಕ್ಷ ರೂ., ಚಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 1.40ಲಕ್ಷ ರೂ., ಕೈಗಡವಾಗಿ 4.5ಲಕ್ಷ ರೂ. ಸಾಲ ಮಾಡಿದ್ದರು. ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಸಂಬಂಧಿಕರು ದೂರಿನಲ್ಲಿ ತಿಳಿಸಿದ್ದಾರೆ.
ಲಕ್ಕಿಕೊಪ್ಪ ಗ್ರಾಮದ ರೈತ ಶಿವಪುತ್ರಪ್ಪ ಸಿದ್ದಪ್ಪ ಮುದವಣ್ಣನವರ(75) ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4ಎಕರೆ 35 ಗುಂಟೆ ಜಮೀನು ಹೊಂದಿದ್ದ ರೈತ ಕೃಷಿಗಾಗಿ ಬೊಮ್ಮನಹಳ್ಳಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4.5ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಕಳೆದ ವರ್ಷ ಅತಿಯಾದ ಮಳೆಯಿಂದ ಬೆಳೆ ಬಾರದೇ ಆರ್ಥಿಕ ಸಂಕಷ್ಟದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಸಂಬಂಧಿಕರು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಪ್ರಕರಣಗಳು ಬಂಕಾಪುರ ಠಾಣೆಯಲ್ಲಿ ದಾಖಲಾಗಿವೆ.