ಗಾಂಜಾ ವಶ 
ಹಾವೇರಿ

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ರಾಣೆಬೆನ್ನೂರ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು 87 ಸಾವಿರ ರೂ. ಮೌಲ್ಯದ 1 ಕೆ.ಜಿ.ಯಷ್ಟು ಗಾಂಜಾ ಹಾಗೂ 1 ಬೈಕ್ ವಶಪಡಿಸಿಕೊಂಡಿದ್ದಾರೆ.

ನಗರದ ಅಡವಿ ಆಂಜನೇಯ ಬಡಾವಣೆ ನಿವಾಸಿ ಚಂದ್ರು ಮಲ್ಲೇಶಪ್ಪ ಮತ್ತೂರ (32) ಹಾಗೂ ಹಾವೇರಿ ಸುಹಾಸ ವೃತ್ತದ ಮುನ್ನಾಬಾದ್ ಓಣಿ ನಿವಾಸಿ ದಾವುಲ್ಮಲ್ಲಿಕಾ ರಫೀಕ್ ಅಹ್ಮದ್ ಧಾರವಾಡ (21) ಬಂಧಿತ ಆರೋಪಿಗಳು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವೈಎಸ್ಪಿ ಲೋಕೇಶ ಜೆ., ಆರೋಪಿತರು ಗ್ರಾಮೀಣ ಠಾಣೆ ವ್ಯಾಪ್ತಿಯ ಅಡವಿ ಆಂಜನೇಯ ಬಡಾವಣೆ ಸೇರಿ ಸುತ್ತಲಿನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 87 ಸಾವಿರ ರೂ. ಮೌಲ್ಯದ 1 ಕೆ.ಜಿ.ಯಷ್ಟು ಗಾಂಜಾ, 1 ಪಲ್ಸರ್ ಬೈಕ್, ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ. ನಗರ ಹಾಗೂ ತಾಲೂಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಈವರೆಗೂ 9 ಪ್ರಕರಣ ಭೇದಿಸಲಾಗಿದೆ ಎಂದು ತಿಳಿಸಿದರು.

ಎಸ್ಪಿ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ನಾಗಯ್ಯ ಕಾಡದೇವರಮಠ, ಪಿಎಸ್ಐಗಳಾದ ಪರಶುರಾಮ ಲಮಾಣಿ, ಆರ್.ಕೆ. ನಿಂಗಜ್ಜೇರ, ಎಎಸ್ಐ ಗಣೇಶ ಅಬ್ಬಿಗೇರಿ, ಸಿಬ್ಬಂದಿಯಾದ ಕೃಷ್ಣರೆಡ್ಡಿ ಆರ್.ಎಲ್., ಮೃತ್ಯುಂಜಯ ಸಂಕಣ್ಣನವರ, ಎನ್.ಆರ್. ಕುಂಟಿಮೆಂಟಿ, ರಮೇಶ ಕರಿಯಣ್ಣನವರ, ಜಿ.ಎಸ್. ಪೂಜಾರ, ಬಿ.ಎಸ್. ಕರಡೆಣ್ಣನವರ, ಮಂಜು ಹುಚ್ಯಾಳವರ ಕಾರ್ಯಾಚರಣೆಯಲ್ಲಿದ್ದರು.