ಅವ್ಯವಸ್ಥಿತ ವಾಹನಗಳ ನಿಲುಗಡೆ ಹಾಗೂ ವಾಹನಗಳ ದಟ್ಟಣೆಗೆ ಒಳಗಾಗಿರುವ ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತ.
ಹಾನಗಲ್ಲ: ಹಲವು ತಾಲೂಕು, ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ದಿನದಿಂದ ದಿನಕ್ಕೆ ಸಂಚಾರ ಸಿಕ್ಕು ಅಧಿಕವಾಗುತ್ತಿದೆ. ಇದರಿಂದ ವಾಹನ ಸವಾರರು, ಜನರು ಸಂಚರಿಸಲು ಪರದಾಡುವಂತಾಗಿದೆ. ಹೀಗಾಗಿ ವೃತ್ತದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿ, ಬೇಕಾಬಿಟ್ಟಿಯಾಗಿ ಓಡಾಡುವ ವಾಹನಗಳಿಗೆ ಬ್ರೇಕ್ ಹಾಕಿ ಸುಗಮ ಸಂಚಾರದ ನಿಯಮಗಳೊಂದಿಗೆ ಜನಸ್ನೇಹಿ ವೃತ್ತವನ್ನಾಗಿ ಮಾಡಬೇಕಾಗಿದೆ.
ಶಿರಶಿ, ಮುಂಡಗೋಡ, ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಈ ವೃತ್ತ ಅಭಿವೃದ್ಧಿಯಾಗಲೇಬೇಕಾದ ಅನಿವಾರ್ಯತೆಯಿದೆ. ಈ ಕುರಿತು ಹಲವಾರು ಬಾರಿ ಸಾರ್ವಜನಿಕರು ವಿವಿಧ ಸಭೆಗಳಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರೂ ಕ್ರಮ ಕೈಗೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ಮಹಾತ್ಮಾಗಾಂಧಿ ವೃತ್ತವನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುವಂತೆ ಮತ್ತು ಅಪಘಾತಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ಸಾರ್ವಜನಿಕರು ಹಲವು ದಿನಗಳಿಂದಲೂ ಒತ್ತಾಯಿಸಿದ್ದಾರೆ. ಈ ಒತ್ತಾಸೆಯನ್ನು ಈಡೇರಿಸಲು ಪುರಸಭೆ ಹಾಗೂ ಪೊಲೀಸ್ ಇಲಾಖೆಗಳು ಶೀಘ್ರ ಕಾರ್ಯಾಚರಣೆ ಕೈಗೊಳ್ಳುವ ಅನಿವಾರ್ಯತೆಯಿದೆ. ಈ ವೃತ್ತ ಖಾಸಗಿ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ಕಡಿವಾಣ ಹಾಕಬೇಕು. ಆಟೋಗಳ ನಿಲುಗಡೆಯೂ ವೃತ್ತದ ಒಂದು ಭಾಗದಲ್ಲಿದೆ. ತಳ್ಳು ಗಾಡಿಗಳಲ್ಲಿ ಹಣ್ಣು, ಹೂವು, ತರಕಾರಿ ವ್ಯಾಪಾರ ಮಾಡುವವರು, ಖಾಸಗಿ ಸಂಚಾರಿ ವಾಹನಗಳು ಪ್ರಯಾಣಿಕರನ್ನು ಕಾಯಲು ಈ ವೃತ್ತದಲ್ಲಿ ಬಹುಕಾಲ ನಿಲುಗಡೆ ಮಾಡುವುದರಿಂದ ಈ ವೃತ್ತ ಗಿಜಿಗುಡುತ್ತಿರುತ್ತದೆ. ಇದಲ್ಲದೇ ಬಹುತೇಕ ಎಲ್ಲ ಸಾರ್ವಜನಿಕ ಪ್ರತಿಭಟನೆಗಳ ಸ್ಥಳವೂ ಇದಾಗಿರುವುದೂ ವಾಹನ ಸಂಚಾರ ಅವ್ಯವಸ್ಥೆಗೆ ಪ್ರಮುಖ ಸಮಸ್ಯೆಯಾಗಿದೆ. ಇದೆಲ್ಲಕ್ಕೂ ಪುರಸಭೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಏನು ಮಾಡಬೇಕು?: ಸಾರ್ವಜನಿಕರ ಒತ್ತಾಸೆ ಮೇರೆಗೆ ಪೊಲೀಸ್ ಹಾಗೂ ಪುರಸಭೆಯ ಸಹಯೋಗದಲ್ಲಿ ಈ ವೃತ್ತವೂ ಸೇರಿದಂತೆ ಪಟ್ಟಣದ 25 ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾ ಕಣ್ಗಾವಲಿನಿಂದ ಇಲ್ಲಿನ ಹಲವು ರೀತಿಯ ಅಪರಾಧ ಕೃತ್ಯಗಳು ನಿಯಂತ್ರಣಗೊಂಡು ಶೇ.90 ರಷ್ಟು ಅಪರಾಧ ಕೃತ್ಯಗಳ ನಿಯಂತ್ರಣ ಸಾಧ್ಯವಾಗಿದೆ ಎಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ. ಇಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ವಾಹನ ಚಾಲನೆಯನ್ನು ನಿಯಂತ್ರಿಸಬೇಕು. ವೃತ್ತದಲ್ಲಿ ವಾಹನಗಳ ನಿಲುಗಡೆ ಮಾಡದಂತೆ ಸೂಚನಾ ಫಲಕಗಳನ್ನು ಹಾಕಬೇಕು. ವಾಹನಗಳ ವೇಗ ನಿಯಂತ್ರಕದ ಅಗತ್ಯವೂ ಇದೆ. ವಾಹನ ಸಂಚಾರ ನಿಯಂತ್ರಣದ ಸಿಗ್ನಲ್ ಲೈಟ್‌ಗಳ ಅಗತ್ಯವೂ ಇದೆ. ಇದೆಲ್ಲವೂ ಸುವ್ಯವಸ್ಥಿತವಾಗಿ ಈಡೇರಲು ಮಹಾತ್ಮಾಗಾಂಧಿ ವೃತ್ತದ ಅಗಲೀಕರಣವಂತೂ ಆಗಲೇಬೇಕು. ಅಂಗಡಿ ಮುಂಗಟ್ಟುಗಳಿಗೆ ಅನಾನುಕೂಲವಾಗದಂತೆ ಇದರ ನಿರ್ವಹಣೆಯೂ ಅಷ್ಟೇ ಮುಖ್ಯವಾಗಿದೆ. ಮಹಾತ್ಮಾಗಾಂಧಿ ವೃತ್ತ ವೈಜ್ಞಾನಿಕವಾಗಿ ಸುಲಭ ಸಂಚಾರಕ್ಕೆ ಸಿದ್ಧಗೊಳ್ಳುವ ಅನಿವಾರ್ಯವಿದೆ. ಇದಕ್ಕೆ ಪುರಸಭೆ ಹಾಗೂ ಪೊಲೀಸ್ ಮತ್ತು ಪಿಡಬ್ಲುೃಡಿ ಇಲಾಖೆಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕಿದೆ.
ಹಾನಗಲ್ಲಿನ ಅತಿ ಹೆಚ್ಚು ಜನ ಸಂದಣಿ ಉಳ್ಳ ವಹಾತ್ಮಾಗಾಂಧಿ ವೃತ್ತ ಏಕ ಮುಖ ವೃತ್ತವಾಗಿ ಅಭಿವೃದ್ಧಿಗೆ ಈಗಲಾದರೂ ಸಂಬಂಧಿಸಿದ ಇಲಾಖೆಗಳು ಕಾಳಜಿವಹಿಸಬೇಕು. ಈ ವೃತ್ತದ ಕೇಂದ್ರ ಸ್ಥಳದಲ್ಲಿ ಪೊಲೀಸ್ ಚೌಕಿ ಅತ್ಯವಶ್ಯ. ಇಲ್ಲಿ ವಾಹನ ನಿಲುಗಡೆ ನಿರ್ಬಂಧಿಸಬೇಕು.
ಇಲ್ಲಿನ ವಾಹನಗಳ ನಿಲುಗಡೆಗೆ ಮಾರ್ಕಿಂಗ್ ಮಾಡುವ ಯೋಜನೆ ರೂಪಿಸಿ, ಅವೈಜ್ಞಾನಿಕ ವಾಹನಗಳ ಪಾರ್ಕಿಂಗ್ ತೆರವು ಮಾಡಬೇಕಾಗಿದೆ. ಇದನ್ನು ಏಕ ಮುಖ ವೃತ್ತವಾಗಿಸಲು ಹೆಚ್ಚಿನ ಖರ್ಚೆನು ಇಲ್ಲ. ಆದರೆ, ಸಾರ್ವಜನಿಕರ ಸಹಕಾರ ಅತ್ಯವಶ್ಯ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿರ್ಣಯಿಸಲಾಗುತ್ತದೆ. ದಿನಂದಿಂದ ದಿನಕ್ಕೆ ವಾಹನ ಓಡಾಟ ಹೆಚ್ಚಾಗುತ್ತಿದ್ದು, ಇದನ್ನು ವಾಹನ ಓಡಾಟಕ್ಕಾಗಿ ಏಕಮುಖ ವೃತ್ತವನ್ನಾಗಿಸುವ ಅಗತ್ಯವೂ ಇದೆ.