ಬ್ಯಾಡಗಿಯಲ್ಲಿ ಮೆಣಸಿನಕಾಯಿ chili ಮಾರುಕಟ್ಟೆಯಲ್ಲಿ ಚೀಲಗಳನ್ನು ಟೆಂಡರ್‌ಗೆ ಹಾಕಿರುವುದು.
ಬ್ಯಾಡಗಿ: ಡಬ್ಬಿ ಹಾಗೂ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ chili ತಳಿಗೆ ಭಾರಿ ಬೇಡಿಕೆ ಬಂದಿದ್ದು, ಮಳೆಗಾಲದಲ್ಲಿಯೂ ಕ್ವಿಂಟಾಲ್‌ಗೆ 50 ಸಾವಿರ ರೂ. ಅಧಿಕ ದರದಲ್ಲಿ ಮಾರಾಟವಾಗುತ್ತಿದೆ.
ಡಬ್ಬಿ ಹಾಗೂ ಕಡ್ಡಿ ಕಾಯಿಗೂ ಬ್ಯಾಡಗಿಯಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಈ ಮಧ್ಯೆ ಪ್ರಸಿದ್ಧ ಖಾರದ ಕಾಯಿ ಗುಂಟೂರು ತಳಿಗೆ ಇಲ್ಲಿ ಪೌಡರ್ ಸಿದ್ಧಪಡಿಸಿ ಮಾರುವ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಅಪಾರ ಬೇಡಿಕೆಯಿದೆ.
60 ಸಾವಿರ ದಾಟಿದ ಬೆಲೆ: ಬ್ಯಾಡಗಿ ಕಡ್ಡಿ ಹಾಗೂ ಡಬ್ಬಿ ತಳಿ ಸೋಮವಾರದ (ಜೂ. 9) ಟೆಂಡರ್‌ನಲ್ಲಿ ಅತಿ ಹೆಚ್ಚು ದರದಲ್ಲಿ ಮಾರಾಟವಾಗಿವೆ. ಬ್ಯಾಡಗಿ ಕಡ್ಡಿಗಿಂತ ಡಬ್ಬಿ ಬಲು ದುಬಾರಿಯಾಗಿದ್ದು, ಕ್ವಿಂಟಾಲ್‌ಗೆ 63,800 ರೂ. ಹಾಗೂ ಕಡ್ಡಿ ತಳಿಗೆ 60,100 ರೂ. ದರದಲ್ಲಿ ಖರೀದಿ ನಡೆದಿದೆ. ಮಾಮೂಲಿಗಿಂತ ಈ ವಾರ ಗುಂಟೂರು ತಳಿಗೂ ಕ್ವಿಂಟಾಲ್‌ಗೆ 17,809 ರೂಪಾಯಿ ಸಿಕ್ಕಿದೆ.
ಸೋಮವಾರ 8328 ಚೀಲಗಳು ಆವಕವಾಗಿದ್ದು, 81 ಜನ ಖರೀದಿದಾರರು ಪಾಲ್ಗೊಂಡಿದ್ದರು. ಕಡ್ಡಿ ತಳಿ 4809ರಿಂದ 60100 ರೂ., ಡಬ್ಬಿ ತಳಿಗೆ 5289 ರಿಂದ 63800 ರೂ. ಹಾಗೂ ಗುಂಟೂರು 1509 ರಿಂದ 17809 ರೂ. ದರದಲ್ಲಿ ಮಾರಾಟವಾಗಿದೆ.
ಕೆಲ ವರ್ಷಗಳ ಹಿಂದೆ ದೀಪಾವಳಿ ನಂತರ ಆರಂಭವಾಗುವ ಮೆಣಸಿನಕಾಯಿ ವ್ಯಾಪಾರ ಏಪ್ರಿಲ್‌ಗೆ ಕೊನೆಯಾಗುತ್ತಿತ್ತು. ಆದರೆ, ಕಳೆದ ದಶಕದಿಂದ ಪಟ್ಟಣಕ್ಕೆ ಹೊಂದಿಕೊಂಡು 40ಕ್ಕೂ ಹೆಚ್ಚು ಶಿತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಸ್ಥಾಪನೆಯಾದವು. ಆಗಿನಿಂದ ವರ್ಷಪೂರ್ತಿ ಮೆಣಸಿನಕಾಯಿ ಟೆಂಡರ್ ನಡೆಯುತ್ತಿದೆ.
ಪ್ರತಿ ಸೋಮವಾರ, ಗುರುವಾರ ಭರ್ಜರಿ ವ್ಯಾಪಾರ ನಡೆಯುತ್ತದೆ. ರೈತರು ಹಂಗಾಮಿನಲ್ಲಿ ಬೆಲೆ ಇಳಿಕೆ ಇತ್ಯಾದಿ ಕಾರಣಗಳಿಂದ ತಮ್ಮ ಮೆಣಸಿನಕಾಯಿ ಚೀಲಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡುತ್ತಾರೆ.
ಮಳೆ ಬೀಳುತ್ತಿದ್ದಂತೆ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಇಳಿಮುಖವಾಗುತ್ತದೆ. ಆದರೆ, ವರ್ಷವಿಡೀ ಮೆಣಸಿನಕಾಯಿ ರವಾನೆ ಮಾಡುವ, ವಿವಿಧ ಕಂಪನಿಗಳಿಗೆ ಪೌಡರ್ ಕಳುಹಿಸುವ ಖರೀದಿದಾರರ ಬೇಡಿಕೆ ಇರುತ್ತದೆ. ಈ ಬಾರಿ ತುಸು ಹೆಚ್ಚಾಗಿರುವುದು ರೈತ ಸಮೂಹಕ್ಕೂ ಬಂಪರ್ ಹೊಡೆದಂತಾಗಿದೆ.