ಹಾನಗಲ್ಲ ತಾಲೂಕಿನ ಗ್ರಾಮವೊಂದರಲ್ಲಿ ಜಾನುವಾರುಗಳಿಗೆ ಸಾಮೂಹಿಕವಾಗಿ ಲಸಿಕೆ ಹಾಕುತ್ತಿರುವ ಪಶುವೈದ್ಯ ಇಲಾಖೆ ಸಿಬ್ಬಂದಿ.
ಹಾನಗಲ್ಲ: ತಾಲೂಕಿನ 25 ಪಶು ಚಿಕಿತ್ಸಾಲಯಗಳ ನಿರ್ವಹಣೆಗೆ ವೈದ್ಯರು ಸೇರಿದಂತೆ 89 ಹುದ್ದೆಗಳಿದ್ದು, ಐವರು ವೈದ್ಯರೂ ಸೇರಿದಂತೆ ಒಟ್ಟು 16 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 73 ಹುದ್ದೆಗಳು ಖಾಲಿ ಇವೆ.
ರಾಜ್ಯದಲ್ಲಿಯೇ ಅತಿದೊಡ್ಡ ತಾಲೂಕಾಗಿದ್ದು, 25 ಪಶು ಚಿಕಿತ್ಸಾಲಯಗಳಿವೆ. ಇತ್ತೀಚೆಗಷ್ಟೇ ಸಮ್ಮಸಗಿ, ಮಾಸನಕಟ್ಟಿ, ಹಿರೇಕಣಗಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಹೊಸ ಆಸ್ಪತ್ರೆಗಳನ್ನು ಮಂಜೂರು ಮಾಡಿಸಿದ್ದಾರೆ. ಆದರೆ ವೈದ್ಯರು-ಸಿಬ್ಬಂದಿ ಕೊರತೆಯ ನಡುವೆ ಆಸ್ಪತ್ರೆಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದೆ.
ತಾಲೂಕಿನಲ್ಲಿ 42,079 ದನಗಳು, 8,544 ಎಮ್ಮೆಗಳು, 35,619 ಕುರಿಗಳು, 15,720 ಮೇಕೆಗಳು, 4,627 ನಾಯಿಗಳು, 1200ಕ್ಕೂ ಅಧಿಕ ಹಂದಿಗಳು ಇವೆ ಎಂಬ ಮಾಹಿತಿಯಿದೆ. ಹಾನಗಲ್ಲ, ತಿಳವಳ್ಳಿ, ಅರಳೇಶ್ವರ, ಕೂಸನೂರು ಹಾಗೂ ಆಡೂರಿನ 5 ಪಶು ಚಿಕಿತ್ಸಾಲಯಗಳಲ್ಲಿ ಮಾತ್ರ ವೈದ್ಯರಿದ್ದು, ಇವರೇ ತಾಲೂಕಿನ ಉಳಿದ 20 ಆಸ್ಪತ್ರೆಗಳ ನಿರ್ವಹಣೆ ಹೊಣೆ ಹೊತ್ತಿದ್ದಾರೆ.
ಇದೆಲ್ಲದರ ನಡುವೆ ರಾಷ್ಟ್ರೀಯ ಕಾಲು-ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಡಿ ಇರುವ ಸಿಬ್ಬಂದಿಗಳೇ 49,836 ಜಾನುವಾರುಗಳಿಗೆ ಲಸಿಕೆ ಹಾಕಿದ್ದಾರೆ. ರಾಷ್ಟ್ರೀಯ ಕರಳುಬೇನೆ ಲಸಿಕಾ ಕಾರ್ಯಕ್ರಮದಡಿ 51,162 ಜಾನುವಾರುಗಳಿಗೆ ಲಸಿಕೆ ನೀಡಿದ್ದಾರೆ. ಇದರೊಂದಿಗೆ ಕುರಿ-ಮೇಕೆಗಳಿಗೆ ಪೆಸ್ಟೀಸ್, ಡೆಸ್, ಪೆಟಿಟ್ಸ ರೋಮಿನೆಂಟ್ಸ್ ಕಾಯಿಲೆಗೆ ಲಸಿಕೆ ಹಾಕಿದ್ದಾರೆ. 4,509 ಕರುಗಳಿಗೆ ರಾಷ್ಟ್ರೀಯ ಕಂದುರೋಗ ಲಸಿಕಾ ಕಾರ್ಯಕ್ರಮದ ಅಡಿ ಲಸಿಕೆ ಹಾಕಿ ಗುರು ಸಾಧಿಸಿದ್ದಾರೆ.
ಈ ನಡುವೆ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ, ಕುರಿ-ಮೇಕೆ, ಹಂದಿ ಸಾಕಣೆ ತರಬೇತಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ. ತಾಲೂಕಿನಲ್ಲಿ 25,000 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಗುರಿ ಹೊಂದಲಾಗಿದ್ದು, ಈಗಾಗಲೇ 24,246 ಜಾನುವಾರುಗಳಗೆ ಕೃತಕ ಗರ್ಭಧಾರಣೆ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರ 83 ಸಹಕಾರಿ ಸಂಘಗಳ ಮೂಲಕ 19,350 ಲೀಟರ್ ಹಾಲು ಪ್ರತಿದಿನ ಉತ್ಪಾದನೆಯಾಗಿ ರವಾನೆಯಾಗುತ್ತಿದೆ. ಅಲ್ಲದೆ 11,000 ಲೀ. ಹಾಲು ಸ್ಥಳೀಯವಾಗಿ ಹೋಟೆಲ್‌ಗಳು, ಮನೆಗಳಿಗೆ ವಿತರಣೆಯಾಗುತ್ತಿದೆ.
ಸಿಬ್ಬಂದಿಯ ಕೊರತೆ ನೀಗಿದರೆ ತಾಲೂಕಿನಾದ್ಯಂತ ಜಾನುವಾರು ಸಂರಕ್ಷಣೆಗೆ ಹೆಚ್ಚು ಸಹಕಾರಿಯಾಗಬಲ್ಲದು. ವೈದ್ಯರು ಹಾಗೂ ಸಿಬ್ಬಂದಿ ಒತ್ತಡವಿಲ್ಲದೇ ಜಾನುವಾರುಗಳ ಆರೈಕೆ ಕೈಗೊಳ್ಳಬಹುದಾಗಿದೆ. ಸರ್ಕಾರ ಈ ಇಲಾಖೆಯನ್ನು ಬಲಪಡಿಸದಿದ್ದರೆ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೈನುಗಾರಿಕೆಗೂ ಹಿನ್ನಡೆಯಾಗುತ್ತದೆ ಎಂಬುದು ರೈತರ ಆತಂಕವಾಗಿದೆ.
ಸಿಬ್ಬಂದಿ ಕೊರತೆ ಮಧ್ಯೆಯೂ ಜಾನುವಾರುಗಳ ಮತ್ತು ಸಾಕು ಪ್ರಾಣಿಗಳ ಸಂರಕ್ಷಣೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಇರುವ ವೈದ್ಯರು ಸರದಿಯಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಎಲ್ಲಿಯಾದರೂ ದಿಢೀರನೆ ಪಶುಗಳ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸಾ ಕ್ರಮ ಕೈಗೊಳ್ಳುತ್ತಾರೆ.
! ಡಾ.ಗಿರೀಶ ರಡ್ಡೇರ, ಸಹಾಯಕ ನಿರ್ದೇಶಕ. ಪಶುವೈದ್ಯ ಇಲಾಖೆ
ಜಾನುವಾರುಗಳ ನಿರ್ವಹಣೆ ಸಮಸ್ಯೆಯಿಂದಾಗಿ ರೈತರು ದನಗಳನ್ನು ಸಾಕುವುದನ್ನು ನಿಲ್ಲಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಜಾನುವಾರುಗಳ ಸಂಖ್ಯೆ ಕುಂಠಿತವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ.
!ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ.