ಹಾನಗಲ್ಲ ತಾಲೂಕಿನ ಚಿಕ್ಕಾಂಶಿಹೊಸೂರಿನ ಚಿನ್ನದ ಅಂಗಡಿಯಲ್ಲಿ ಸ್ಥಳ ಮಹಜರ್ ವೇಳೆ ಕತ್ತು ಕೊಯ್ದುಕೊಳ್ಳಲು (Cut the throat) ಮುಂದಾದ ಕಳವು ಪ್ರಕರಣದಆರೋಪಿ
ಹಾನಗಲ್ಲ: ತಾಲೂಕಿನ ಚಿಕ್ಕಾಂಶಿಹೊಸೂರಿನಲ್ಲಿ ನಡೆದಿದ್ದ ಚಿನ್ನದ ಅಂಗಡಿ ಕಳ್ಳತನ ಪ್ರಕರಣದ ಸ್ಥಳ ಮಹಜರಿಗೆ ಕರೆದುಕೊಂಡು ಬಂದ ವೇಳೆ ಆರೋಪಿಯೊಬ್ಬ ಕತ್ತು ಕೊಯ್ದುಕೊಳ್ಳಲು (Cut the throat) ಮುಂದಾದ ಘಟನೆ ಬುಧವಾರ ನಡೆದಿದೆ.
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ ಮೊಡಕೇರ ಹಾಗೂ ಅಶೋಕ ಅಲಿಯಾಸ್ ರಮೇಶ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಪಂಚನಾಮೆಗಾಗಿ ಅಂಗಡಿಗೆ ಕರೆತಂದಿದ್ದರು. ಈ ವೇಳೆ ಜನರನ್ನು ಕಂಡ ಆರೋಪಿಯೊಬ್ಬ ಚಿನ್ನದ ಅಂಗಡಿಯಲ್ಲಿ ಬಿದ್ದಿದ್ದ ಗ್ಲಾಸ್ ಚೂರಿನಿಂದಲೇ ಕತ್ತು ಕೊಯ್ದುಕೊಳ್ಳಲು ಮುಂದಾಗಿ ಪೊಲೀಸರನ್ನು ಹೆದರಿಸಲು ಯತ್ನಿಸಿದ್ದಾನೆ. ಪೊಲೀಸರ ಮುಂದೆಯೇ ಆರೋಪಿಗಳು ಸಿನಿಮೀಯ ಮಾದರಿಯಲ್ಲಿ ಕುತ್ತಿಗೆ ಕೊಯ್ದುಕೊಳ್ಳುವ ಬೆದರಿಕೆ ಒಡ್ಡಿದ್ದಾರೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದರೋಡೆ ಆರೋಪಿಗಳ ಈ ಡ್ರಾಮಾ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು, ಆರೋಪಿಗಳನ್ನು ಸರಿಯಾಗಿ ಬೆಂಡೆತ್ತುವಂತೆ ಕೂಗಿರುವುದೂ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಅಂಗಡಿ ದರೋಡೆ ಮಾಡಿದ್ದ 8 ಜನರ ಗ್ಯಾಂಗ್ ಪತ್ತೆ ಹಚ್ಚಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಬಂಧಿತರಿಂದ 1.15 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.