ಹಾನಗಲ್ಲ ತಾಲೂಕಿನ ಕೂಸನೂರು ಗ್ರಾಮದಲ್ಲಿ ಶೌಚಗೃಹದ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು. 
ಹಾವೇರಿ

ಮಲ ಹೊರುವ ಪದ್ಧತಿ ಇನ್ನೂ ಜೀವಂತ !

ಹಾನಗಲ್ಲ: ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ತಾಲೂಕಿನ ಕೂಸನೂರ ಗ್ರಾಮದಲ್ಲಿ ಇಬ್ಬರು ಕಾರ್ಮಿಕರಿಂದ ಶೌಚಗೃಹದ ಮಲ ತೆರವುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. 
 ಕೂಸನೂರ ಗ್ರಾಮದ ಸುರೇಶ ಪೂಜಾರ ಹಾಗೂ ಬಸವರಾಜ ಪೂಜಾರ ಅವರ ಮನೆಯ ಶೌಚಗೃಹದ ಮಲವನ್ನು ತೆರವುಗೊಳಿಸಲು ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದ ಇಬ್ಬರು ಕಾರ್ಮಿಕರನ್ನು ಕರೆತರಲಾಗಿತ್ತು. ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ರೇಣುಕಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
 ಮಲಗುಂಡಿಯಲ್ಲಿ ಇಳಿದು ಇಬ್ಬರು ಕೆಲಸಗಾರರು ಬಕೆಟ್ ಮತ್ತಿತರ ಸಾಮಗ್ರಿಗಳಿಂದ ಮಲ ಹೊರಗೆ ತೆಗೆದು ಪಕ್ಕದ ತಿಪ್ಪೆಯಲ್ಲಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದರು. ನಿಷೇಧಿತ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ಇನ್ನೂ ಜೀವಂತವಾಗಿರುವ ಘಟನೆ ಹಾನಗಲ್ಲ ತಾಲೂಕಿನಲ್ಲಿ ನಡೆದಿರುವುದು ಜನ ತಲೆ ತಗ್ಗಿಸುವಂಥದಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ರಾಜು ಕೆಳಗಿನಮನೆ ಹಾಗೂ ಪ್ರಶಾಂತ ಕೆಳಗಿನಮನೆ ಅವರನ್ನು ಆಡೂರು ಪಿಎಸ್‌ಐ ಶರಣಪ್ಪ ಹಂಡ್ರಗಲ್ ಅವರ ವಶಕ್ಕೆ ನೀಡಲಾಯಿತು.
ನಂತರ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡಲಾಯಿತು. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಮನೆಯ ಇಬ್ಬರು ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.