ರಾಣೆಬೆನ್ನೂರು: ಹಳೇ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಅನುದಾನಿತ ಶಾಲಾ ಕಾಲೇಜುಗಳ ಕಾಲೇಜುಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳು ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ ಆರ್.ಎಚ್.ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಶಿವಾ ಗ್ರಾಮಾಂತರ ಪ್ರೌಢ ಶಾಲೆ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಹಳೇ ರಾಷ್ಟ್ರೀಯ ಹೆದ್ದಾರಿ ಮೂಲಕ ತಹಸೀಲ್ದಾರ ಕಚೇರಿಗೆ ಬಂದು ಸೇರಿತು.
ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎಚ್.ಪಿ. ಬಣಕಾರ ಅವರು ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಏ.೧.೨೦೦೬ ರ ಮೊದಲು ನೇಮಕವಾದವರಿಗೆ ಹಳೇ ಪಿಂಚಣಿ ಯೋಜನೆ ಒದಗಿಸಬೇಕು. ಏ.೪.೨೦೦೬ರ ನಂತರ ನೇಮಕವಾದ ಅನುದಾನಿತ ನೌಕರರಿಗೆ ಒಪಿಎಸ್ ಸೌಲಭ್ಯ ಜಾರಿಗೊಳಿಸಬೇಕು. ಆರೋಗ್ಯ ಸಂಜೀವಿನಿ ಸೌಲಭ್ಯ ಅನುದಾನಿತ ಶಾಲಾ ನೌಕರರಿಗೆ ವಿಸ್ತರಿಸಬೇಕು. ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತು ನೌಕರರಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಶಾಲಾ ಮಕ್ಕಳಿಗೂ ನೀಡಬೇಕು ಎಂದರು.
ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ಚಲವಾದಿ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡುವವರ ಬದುಕು ಇಂದು ಬೀದಿಗೆ ಬಂದಿದೆ. ನಿವೃತ್ತಿಯಾದ ದಿನ ಬರಿಗೈಲಿ ಮನೆಗೆ ತೆರಳುವಂತಾಗಿದೆ. ಅವರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ ನಿವೃತ್ತಿ ಹೊಂದಿದ ಶಿಕ್ಷಕರು ಕುಟುಂಬದ ನಿರ್ವಹಣೆಗಾಗಿ ಅಲ್ಲಲ್ಲಿ ಸೆಕ್ಯೂರಿಟಿ ಗಾರ್ಡ, ಹೊಟೇಲ್, ಖಾಸಗಿ ಕೆಲಸ, ಕೃಷಿ ಕಾಯಕ ಸೇರಿದಂತೆ ಬೀದಿ ಬದಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಕೆಲ ನೌಕರರು ಆತಂಕದಲ್ಲಿ ಮರಣ ಹೊಂದಿದ್ದಾರೆ. ಇದರಿಂದ ಅವರ ಕುಟುಂಬ ಬೀದಿ ಪಾಲಾಗಿದೆ. ಹಾಗಾಗಿ ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಎಲ್ಲಾ ಹಂತದಲ್ಲೂ ಮನವಿ ಮಾಡಿದ್ದೇವೆ. ಸರ್ಕಾರ ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸಕಾಲಕ್ಕೆ ಈಡೇರಿಸದಿದ್ದರೆ ಸಂಘಟನೆ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗವುದು ಎಂದು ಎಚ್ಚರಿಸಿದರು.
ಕಾರ್ಯದರ್ಶಿ ಚಂದು ಎನ್.ಗ್ಯಾನಗೌಡ್ರ, ಅನುದಾನಿತ ಶಾಲಾ ಶಿಕ್ಷಕರ ಮುಖ್ಯ ಶಿಕ್ಷಕರ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಚಲವಾದಿ ಹೋರಾಟದ ರೂಪರೇಶಗಳ ಕುರಿತು ಮಾತನಾಡಿದರು.
ಎಸ್.ಎನ್. ಪಾರ್ವತೇರ, ಶಿವಾನಂದ ಸಂಗಾಪುರ, ಜಿ.ಆರ್. ಹನುಮಂತಪ್ಪ, ಬಿ.ಎಂ. ಬೆಲ್ಲದ, ಐ.ಎ. ದಾವಲಖಾನ್, ಎಸ್.ಎಂ. ಯಳೇಹೊಳಿ, ಅನ್ನಪೂರ್ಣ ಚವ್ಹಾಣ, ವೀರೇಶ ಜಂಬಿಗಿ, ಮೈಲಾರಿ ಪದಕಿ, ಆರ್.ವಿ. ಸೂರಗೊಂಡ, ಎಂ.ಬಿ. ಎಮ್ಮೇರ, ಸಿದ್ದೇಶ ಎಸ್.ಜಿ, ಪಿ.ಎನ್. ನಲೋಗಲ್, ಎಸ್.ಆರ್. ತೆವರಿ, ಪ್ರಭು ಯರೇಶಿಮಿ, ರಮೇಶ ಅರ್ಕಾಚಾರಿ, ವೆಂಕಟೇಶ ಹೊಸಮನಿ, ಎಸ್.ಡಿ. ಚವ್ಹಾಣ, ರೂಪಾ ಕಡೂರ, ಎಲ್.ಸಿ .ಮಾಚೇನಹಳ್ಳಿ, ಬಸವರಾಜ ನಾಯಕ, ಕಾಂತೇಶ ಮಾದಾಪುರ,ರವಿ ಮುದಿಗೌಡ್ರ, ಎನ್.ಎ. ಕಲ್ಲೇದೇವರ, ಶಾಂತರಾಜ, ಎಂ.ಎಲ್. ಲಮಾಣಿ, ಎಸ್.ಎಂ. ಯಳೇಹೊಳಿ, ಶೈಲಜಾ ಎಂ, ರವಿಕುಮಾರ ಲಮಾಣಿ, ಎಸ್.ಆರ್. ಕುಲಕರ್ಣಿ, ರಮೇಶ ಬಡಕರಿಯಪ್ಪನವರ ಇದ್ದರು.