ಹಾನಗಲ್ಲಿನಲ್ಲಿ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ವಿಠಲ್ ಚೌಗುಲಾ ಮಾತನಾಡಿದರು. ಜಗದೀಶ ಕಮ್ಮಾರ, ಚಂದ್ರಶೇಖರ ನೆಗಳೂರ, ಪರಶುರಾಮ ಪೂಜಾರ, ಗಿರೀಶ್ ರಡ್ಡೇರ, ವೈ.ಕೆ.ಜಗದೀಶ್ ಸಭೆಯಲ್ಲಿದ್ದರು.
ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ಗ್ರಾಮೀಣ ಕುಡಿಯುವ ನೀರಿಗಾಗಿ ಖಾಸಗಿ ಕೊಳವೆ ಬಾವಿಗಳತ್ತ ಮುಖ ಮಾಡಿರುವ ಗ್ರಾಮ ಪಂಚಾಯಿತಿಗಳು ಈಗಾಗಲೇ ಹಾನಗಲ್ಲ ತಾಲೂಕಿನಲ್ಲಿ 8 ಗ್ರಾಮ ಪಂಚಾಯಿತಿಗಳ 10 ಗ್ರಾಮಗಳಿಗೆ 11 ಕೊಳವೆ ಬಾವಿಗಳನ್ನು ಕುಡಿಯುವ ನೀರಿಗಾಗಿ ಬಾಡಿಗೆಯಾಗಿ ಪಡೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದರು.
ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕುಡಿಯುವ ನೀರು ನಿರ್ವಹಣಾ ಯೋಜನಾ (ಟಾಸ್ಕಫೋರ್ಸ್ ಸಮಿತಿ) ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, 42 ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಅವರು ತಾಲೂಕಿನ ಕುಡಿಯುವ ನೀರಿನ ಸ್ಥಿತಿಗತಿಗಳ ವಿವರ ನೀಡಿದರು.
ಹಾನಗಲ್ಲ ತಾಲೂಕಿನಲ್ಲಿ 166 ಗ್ರಾಮ, 42 ಗ್ರಾಮ ಪಂಚಾಯಿತಿಗಳಿವೆ. ಅಂತರ್ಜಲ ಕೊರತೆಯಿಂದ ಪ್ರತಿ ವರ್ಷ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೈತರ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ಪ್ರಸಕ್ತ ವರ್ಷ ಹುಲಗಿನಕೊಪ್ಪ, ಗಿರಿಸಿನಕೊಪ್ಪ, ಗುರುರಾಯಪಟ್ಟಣ, ಶಂಕ್ರಕೊಪ್ಪ, ಗೊಂದಿ, ಹಿರೇಕಾಂಶಿ, ನರೇಗಲ್ಲ, ಚಿಕ್ಕೇರಿಹೊಸಳ್ಳಿ, ಹೊಂಕಣ, ಬೊಮ್ಮನಹಳ್ಳಿ ಹೀಗೆ 10 ಗ್ರಾಮಗಳಿಗೆ ಮಾರ್ಚ್ ತಿಂಗಳ ಮೊದಲ ವಾರದಿಂದಲೇ ಆದ್ಯತೆ ಮೇರೆಗೆ ಕೊಳವೆ ಬಾವಿಗಳನ್ನು ರೈತರಿಂದ ಬಾಡಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲಿಯೂ ಟ್ಯಾಂಕರ್ ನೀರು ಪೂರೈಕೆ ಇಲ್ಲ: ಮುಂಗಾರು ಪೂರ್ವ ಮಳೆಗಳು ವಿಳಂಬಗೊಂಡರೆ ನೆಲ್ಲೀಬೀಡ, ಬಿಂಗಾಪುರ, ರಾಮತೀರ್ಥ ಹೊಸಕೊಪ್ಪ, ಗುಡ್ಡದಮತ್ತಿಹಳ್ಳಿ, ಸೋಮಸಾಗರ ಸೇರಿದಂತೆ 19 ಗ್ರಾಮಗಳಿಗೆ ನೀರಿನ ಕೊರತೆಯ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಈಗಾಗಲೇ ತಾಲೂಕಿನಲ್ಲಿರುವ ಚಿಕ್ಕಾಂಸಿ ಹೊಸೂರು, ಕೂಸನೂರು, ಉಪ್ಪಣಸಿ, ಕೂಡಲದಲ್ಲಿರುವ 4 ಬಹುಗ್ರಾಮ ಕುಡಿಯುವ ನೀರಿನ ಘಟಕಗಳಲ್ಲಿ ತಾಂತ್ರಿಕ ಕಾರಣದಿಂದಾಗಿ ಕೂಸನೂರ ಹಾಗೂ ಕೂಡಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ನೆಲ್ಲಿಬೀಡದಲ್ಲಿ ಬಾಡಿಗೆ ತೆಗೆದುಕೊಂಡ ಕೊಳವೆ ಬಾವಿಯಲ್ಲೂ ನೀರು ಖಾಲಿಯಾಗಿದೆ. ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಬಾದಮಗಟ್ಟಿಯಲ್ಲಿ ಕೊಳವೆ ಬಾವಿಯಿಂದ ಶಿಲ್ಟ್ ನೀರು ಬರುತ್ತಿದೆ. ಇಂತಹ ಕೊಳವೆ ಬಾವಿಗಳಿಂದ ನೀರು ಪೂರೈಕೆ ನಿಲ್ಲಿಸಿ ಬೇರೆ ಕೊಳವೆಬಾವಿಗಳಿಗೆ ಶೋಧ ನಡೆದಿದೆ. ಸದ್ಯಕ್ಕೆ ಹೊಸ ಕೊಳವೆಬಾವಿ ಕೊರೆಯುವ ಯೋಜನೆ ಇಲ್ಲ. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ವಿತರಿಸುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನೀರಿನ ಸಮಸ್ಯೆಯಾದರೆ ಗಮನಕ್ಕೆ ತನ್ನಿ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಮಾತನಾಡಿ, ಏನೇ ಆದರೂ ಕುಡಿಯುವ ನೀರಿಗೆ ಕೊರತೆಯಾಗದಂತೆ ಕಾಳಜಿವಹಿಸಬೇಕು. ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಮದುವೆ ಸೇರಿದಂತೆ ವಿವಿಧ ಮಂಗಳ ಕಾರ್ಯಗಳಿಗೆ ಖಾಸಗಿಯಾಗಿಯೇ ನೀರು ಪೂರೈಕೆಗೆ ಸೂಚಿಸಬೇಕು. ಪ್ರತಿ ಮನೆಯ ನಲ್ಲಿಗಳಿಂದ ನೀರು ಪೋಲಾಗದಂತೆ ಟ್ಯಾಪ್ ಅಳವಡಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಮ ಪಂಚಾಯಿತಿಗಳು ಲಭ್ಯ ಇರುವ ಅನುದಾನದಲ್ಲಿ ಕುಡಿಯುವ ನೀರಿಗಾಗಿ ಹಣ ಕಾಯ್ದಿರಿಸಬೇಕು. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾದರೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ನರೇಗಾ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ಗಿರೀಶ್ ರಡ್ಡೇರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.