ಶಿಗ್ಗಾಂವ ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ, ಡಾ.ನಾಗರಾಜ ಜಿ. ದ್ಯಾಮನಕೊಪ್ಪ, ಡಾ.ಆರ್.ಎಸ್.ಅರಳೆಲೆಮಠ ಇತರರಿದ್ದರು. 
ಹಾವೇರಿ

ಉತ್ತಮ ಮನುಷ್ಯನಾಗುವ ನಿರಂತರ ಪ್ರಕ್ರಿಯೆ ಶಿಕ್ಷಣ: Talent Award

ಮಂಜುನಾಥ ಗದಗಿನ

ಶಿಗ್ಗಾಂವ: ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು ಅಥವಾ ಉದ್ಯೋಗ ಪಡೆಯುವುದಲ್ಲ. ಅದು ಉತ್ತಮ ಮನುಷ್ಯನಾಗುವ ನಿರಂತರ ಪ್ರಕ್ರಿಯೆ ಎಂದು ಸಾಹಿತಿ ಡಾ.ವೈ.ಎಂ. ಯಾಕೊಳ್ಳಿ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಸೊಸೈಟಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ, ಹುದ್ದೆ ಹಾಗೂ ಸಂಪತ್ತು ಜೀವನಕ್ಕೆ ಅಗತ್ಯವಾದರೂ ಸಂಸ್ಕಾರ, ವಿವೇಕ ಮತ್ತು ಮಾನವೀಯತೆ ಬದುಕಿಗೆ ನಿಜವಾದ ಅರ್ಥ ನೀಡುತ್ತವೆ. ಪಿಯುಸಿ ಹಂತವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಮಹತ್ವದ ಘಟ್ಟವಾಗಿದ್ದು, ಕೇವಲ ಅಂಕ ಗಳಿಕೆಯನ್ನೇ ಗುರಿಯಾಗಿಸಿಕೊಳ್ಳದೆ ತಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿಕೊಂಡು ಬೆಳೆಸಿಕೊಳ್ಳಬೇಕು ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಸೊಸೈಟಿ ಅಧ್ಯಕ್ಷ ಡಾ.ಆರ್.ಎಸ್. ಅರಳೆಲೆಮಠ ಮಾತನಾಡಿ, ಶಿಕ್ಷಕರ ಮಾರ್ಗದರ್ಶನ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವೇ ವ್ಯಕ್ತಿತ್ವ ರೂಪಿಸುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ನಾಗರಾಜ ಜಿ. ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿ.ಎಂ. ಅರಗೋಳ, ಎಂ.ಎ. ಗಾಣಿಗೇರ, ಎಂ.ಬಿ. ನೀರಲಗಿ, ಉಪನ್ಯಾಸಕರಾದ ಕೆ. ಬಸಣ್ಣ, ಎಂ.ಎಸ್. ಕುರಂದವಾಡ, ಮಹೇಶ ಲಕ್ಷ್ಮೇಶ್ವರ, ಪ್ರೇಮಾ ಜೀವಾಜಿ, ದೀಪಾ ಕಬ್ಬೇರ ಉಪಸ್ಥಿತರಿದ್ದರು. ಡಾ. ಕೆ.ಎಸ್. ಬರದೆಲಿ ಸ್ವಾಗತಿಸಿದರು. ಮಂಜುನಾಥ ಕಾಳೆ ನಿರೂಪಿಸಿದರು. ಕೆ.ಸಿ. ಹೂಗಾರ ವಂದಿಸಿದರು.