ಕಬ್ಬಿನ ದರ ಹೆಚ್ಚಳ ಮಾಡುವಲ್ಲಿ ರೈತಪರ ಧ್ವನಿ ಎತ್ತಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಹಾವೇರಿಯಲ್ಲಿ ಗುರುವಾರ ಹಾನಗಲ್ಲ ತಾಲೂಕಿನ ರೈತ ಮುಖಂಡರು ಸನ್ಮಾನಿಸಿದರು. ರೈತ ಮುಖಂಡ ರಾಜಶೇಖರ ಹಲಸೂರ, ಗುಡನಗೌಡ್ರ ವಿ. ಹೊಸಗೌಡ್ರ, ಶಂಕ್ರಪ್ಪ ಬ. ಸಂಕಣ್ಣವರ, ಸಿದ್ದಪ್ಪ ಗುರುಸಿದ್ದಪ್ಪನವರ, ಇತರರಿದ್ದರು.
ಹಾವೇರಿ: ಕಬ್ಬಿನ ದರ ಹೆಚ್ಚಳ ಕುರಿತು ರೈತರ ಬಗೆಗೆ ಹೆಚ್ಚಿನ ಮುತುವಜಿರ್ ವಹಿಸುವ ಮೂಲಕ ದರ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಹಾನಗಲ್ಲ ತಾಲೂಕಿನ ಕಬ್ಬು ಬೆಳೆಗಾರರು ಸನ್ಮಾನಿಸಿ ಗೌರವಿಸಿದರು.
ಹಾನಗಲ್ಲ ರೈತ ಮುಖಂಡ ರಾಜಶೇಖರ ಹಲಸೂರ ಮಾತನಾಡಿ, ಕಬ್ಬಿನ ದರ ಹೆಚ್ಚಳ ಮಾಡುವ ಕುರಿತು ಹಲವು ದಿನಗಳಿಂದ ಪ್ರತಿಭಟನೆ ಆರಂಭವಾಗಿತ್ತು. ಕಬ್ಬಿನ ದರ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಸತತ ಪ್ರಯತ್ನ ಮಾಡಿದರು. ಕಾರ್ಖಾನೆ ಮಾಲೀಕರು ಹಾಗೂ ರೈತರ ಜತೆಗೆ ಹಲವು ಬಾರಿ ಮಾತುಕತೆ ಮಾಡಿದರು. ಬುಧವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಸುದೀರ್ ಸಭೆ ಮಾಡಿ ರೈತರು ಒಪ್ಪುವಂಥ ದರ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹೊಸ ದರ ನಿಗದಿಯಿಂದ ರೈತರು ಬಹಳ ಸಂತೋಷಗೊಂಡಿದ್ದು, ಎಂದೆಂದೂ ಕಾಣದ ದರ ಈಗ ಸಿಕ್ಕಿದೆ. ಕಾರ್ಖಾನೆ ಮಾಲೀಕರು ಕಬ್ಬು ಸಾಗಣೆ ಮಾಡಿದ 15 ದಿನದ ಒಳಗೆ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಕ್ರಮ ಜರುಗಿಸಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ರೈತರು ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡಿಸಿ, ಕಾರ್ಖಾನೆಗೆ ಕಳುಹಿಸಬೇಕು. ತಮ್ಮ ಜಮೀನುಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದರೆ ಎಚ್ಚರಿಕೆ ವಹಿಸಿ. ವಾಹನ ಸಂಚಾರದ ವೇಳೆ ಧ್ವನಿವರ್ದಕಗಳನ್ನು ಏರುಧ್ವನಿಯಲ್ಲಿ ಹಚ್ಚಬೇಡಿ. ಯಾವುದೇ ಸಮಸ್ಯೆ, ಅನಾಹುತ ಆಗದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಪ್ರಮುಖರಾದ ಗುಡನಗೌಡ್ರ ವಿ. ಹೊಸಗೌಡ್ರ, ಶಂಕ್ರಪ್ಪ ಬ. ಸಂಕಣ್ಣವರ, ಸಿದ್ದಪ್ಪ ನೀ. ಗುರುಸಿದ್ದಪ್ಪನವರ, ರುದ್ರಪ್ಪ ಸಿ. ಸಂಕಣ್ಣವರ, ಇತರರಿದ್ದರು.