ಹಾನಗಲ್ಲ ತಾಲೂಕಿನ ರೈತರ ಹೊಲದಲ್ಲಿ ಮಣ್ಣು (soil test) ಮಾದರಿ ತೆಗೆಯುತ್ತಿರುವ ಕೃಷಿ ಇಲಾಖೆ ಸಿಬ್ಬಂದಿ.
ಹಾನಗಲ್ಲ: ವೈಜ್ಞಾನಿಕ ತಳಹದಿಯಲ್ಲಿ ಬೇಸಾಯ ಬೇಕೆಂಬ ಚರ್ಚೆಗಳ ನಡುವೆ ಸರ್ಕಾರ ಯೋಜಿಸಿರುವ ಉಚಿತ ಮಣ್ಣಿನ ಪರೀಕ್ಷೆ (soil test) ಸೌಲಭ್ಯಗಳು ರೈತರನ್ನು ತಲುಪುವಲ್ಲಿ ವಿಳಂಬವಾಗುತ್ತಿರುವುದು ಕೃಷಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
ಹಾನಗಲ್ಲ ತಾಲೂಕಿನಲ್ಲಿ 46 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. 38 ಸಾವಿರಕ್ಕೂ ಅಧಿಕ ರೈತರಿದ್ದಾರೆ. ರಾಸಾಯನಿಕಗಳ ಬಳಕೆ ಬೇಕು- ಬೇಡ ಎಂಬ ಜಿಜ್ಞಾಸೆಯೂ ಈಗ ಆರಂಭವಾಗಿದೆ. ಈ ನಡುವೆ ತಮ್ಮ ಭೂಮಿಗೆ ಅಗತ್ಯವಿರುವ ಪೋಷಕಾಂಶಗಳ ಬಗ್ಗೆ ತಿಳಿಯಲು ಮಣ್ಣಿನ ಪರೀಕ್ಷೆ ಆಗಬೇಕಾಗಿದೆ. ಆದರೆ, ಇಡೀ ತಾಲೂಕಿನ ಪ್ರತಿ ರೈತರ ಕೃಷಿ ಭೂಮಿಗೆ ತಲುಪಿ ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಬೇಕಾದ ವ್ಯವಸ್ಥೆ ಮಾತ್ರ ತೃಪ್ತಿಕರವಾಗಿಲ್ಲ.
ತಾಲೂಕಿಗೆ ಒಂದೇ ಮಣ್ಣು ಪರೀಕ್ಷೆ ವಾಹನವಿದ್ದು, ವರ್ಷಕ್ಕೆ 1200 ಮಾದರಿ ಪರೀಕ್ಷಿಸಬಹುದಾಗಿದೆ. ಆದರೆ, 46 ಸಾವಿರ ಹೆಕ್ಟೇರ್ ಭೂಮಿಯ 38 ಸಾವಿರ ರೈತರನ್ನು ತಲುಪುವುದು ಯಾವಾಗ ಎಂಬ ಪ್ರಶ್ನೆ ಇದೆ. ಈಗಿರುವ ತಾಲೂಕಿನಲ್ಲಿನ ಒಂದೇ ಕೃಷಿ ಸಂಜೀವಿನಿ ವಾಹನವು ಅಧಿಕಾರಿಗಳ ಕೃಷಿ ಕ್ಷೇತ್ರ ಭೇಟಿಗೆ, ಧರತಿ ಮಾತಾ ಬಚಾವೋ ಆಂದೋಲನ ಸೇರಿದಂತೆ ಪ್ರಚಾರಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇಲಾಖೆ ನೀಡಿದ ಗುರಿ ತಲುಪಿ ಅಲ್ಲಿಗೆ ಮಣ್ಣು ಪರೀಕ್ಷೆ ನಿಲ್ಲಿಸಲಾಗುತ್ತದೆ. ಹೀಗಾಗಿ, ಭೂಗುಣ ಆಧರಿಸಿ ಪೋಷಕಾಂಶಗಳನ್ನು ಹಾಕಬೇಕೆಂಬ ಯೋಜನೆ ಸಾಕಾರವಾಗಲು ಮೂರೂ ಹೋಬಳಿಗೆ ಒಂದರಂತೆ ಇನ್ನೂ ಎರಡು ಕೃಷಿ ಸಂಜೀವಿನಿ ವಾಹನ ಬೇಕಾಗಿವೆ. ವಾಹನದ ಜತೆಗೆ ಸಾಕಷ್ಟು ಸಿಬ್ಬಂದಿ, ಅಗತ್ಯ ಸಾಮಗ್ರಿ ನೀಡಿದರೆ, ಮಾತ್ರ ಈ ಯೋಜನೆ ಸಫಲವಾಗಬಲ್ಲದು.
ಇಲ್ಲಿನ ಸಿಬ್ಬಂದಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ಹಾವೇರಿ ತಾಲೂಕಿನ ದೇವಿಹೊಸೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿ, ಮಣ್ಣಿನಲ್ಲಿಯ ಪೋಷಕಾಂಶಗಳ ಸ್ಥಿತಿಗತಿ ತಿಳಿಯಬೇಕಾಗಿದೆ. ಹಾನಗಲ್ಲಿನಲ್ಲಿಯೇ ಮಣ್ಣು ಮಾದರಿ ಪರೀಕ್ಷೆ ಕೇಂದ್ರ ತೆರೆದರೆ, ರೈತರಿಗೆ ಹೆಚ್ಚು ಅನುಕೂಲ. ಹಾನಗಲ್ಲ ರಾಜ್ಯದಲ್ಲಿಯೇ ಅತಿದೊಡ್ಡ ತಾಲೂಕು ಆಗಿರುವುದರಿಂದ ಕೃಷಿ ಕ್ಷೇತ್ರವೂ ಹೆಚ್ಚಾಗಿದೆ. ಅದಕ್ಕಾಗಿಯೇ ಇಂತಹ ಸೌಲಭ್ಯ ಬೇಕು ಎಂಬ ಬೇಡಿಕೆ ರೈತರದ್ದಾಗಿದೆ.
"
ಮಣ್ಣು ಪರೀಕ್ಷೆಯ ಕೃಷಿ ಸಂಜೀವಿನಿ ವಾಹನದ ಮೂಲಕ ತಾಲೂಕಿನಲ್ಲಿ ಸರ್ಕಾರ ನಿಗದಿ ಮಾಡಿದ ಸಂಖ್ಯೆಯಲ್ಲಿ ಮಣ್ಣು ಮಾದರಿ ತೆಗೆದು, ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿ, ಮಾದರಿಯಲ್ಲಿನ ಪೋಷಕಾಂಶಗಳ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತಿದೆ. ತಾಲೂಕಿಗೆ ಇನ್ನೂ ಎರಡು ಕೃಷಿ ಸಂಜೀವಿನಿ ವಾಹನಗಳ ಅಗತ್ಯವಿದ್ದು, ಬೇಡಿಕೆ ಸಲ್ಲಿಸಲಾಗಿವೆ.
| ಸಿ.ಟಿ. ಸುರೇಶ, ಸಹಾಯಕ ಕೃಷಿ ನಿರ್ದೇಶಕ, ಹಾನಗಲ್ಲ.
"
ಮಣ್ಣಿನ ಪರೀಕ್ಷೆ ಮಾಡಿಸಿ ಅದಕ್ಕನುಗುಣವಾಗಿ ಪೋಷಕಾಂಶ ಒದಗಿಸಬೇಕು ಎಂದು ಕೃಷಿ ಇಲಾಖೆ ಹೇಳುತ್ತದೆ. ಆದರೆ, ಮಣ್ಣು ಮಾದರಿ ತೆಗೆಯುವ ಸಂಖ್ಯಾ ಪ್ರಮಾಣ ಮಾತ್ರ ತುಂಬ ಕಡಿಮೆ ಇದೆ. ಈ ಕೃಷಿ ಸಂಜೀವಿನಿ ವಾಹನಕ್ಕೆ ಸಿಬ್ಬಂದಿ ಕೊರತೆಯೂ ಇದೆ. ಸರ್ಕಾರ ಹೇಳುವಷ್ಟು ಪರಿಣಾಮಕಾರಿಯಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ.
| ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ.