ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ಶ್ರೀ ವಿರಕ್ತಮಠದಲ್ಲಿ ಏರ್ಪಡಿಸಿದ್ದ ಧರ್ಮ ಸಮಾರಂಭದಲ್ಲಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತುಲಾಭಾರ ಕೈಗೊಳ್ಳಲಾಯಿತು. ಜಗದ್ಗುರು ಶಾಂತಭೀಷ್ಮ ಸ್ವಾಮೀಜಿ, ವಿವಿಧ ಮಠಾಧೀಶರು, ಮಲ್ಲಿಕಾರ್ಜುನಯ್ಯ ಆರಾಧ್ಯಮಠ ಇತರರಿದ್ದರು.
- ಧರ್ಮ ಸಮಾರಂಭದಲ್ಲಿ ಶ್ರೀ ಮಹಾಂತಲಿಂಗ ಶಿವಾಚಾರ್ಯರ ಆಶೀರ್ವಚನ
ಸವಣೂರು
ತಾಲೂಕಿನ ಹತ್ತಿಮತ್ತೂರು ಶ್ರೀ ವಿರಕ್ತಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ತ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳ ನೆನಹು ಹಾಗೂ ಹತ್ತಿಮತ್ತೂರು-ಕರ್ಜಗಿ ವಿರಕ್ತಮಠದ ಲಿಂ. ಶ್ರೀ ರುದ್ರಮುನಿ ಮಹಾಸ್ವಾಮೀಜಿ 42ನೇ ಪುಣ್ಯಸ್ಮರಣೋತ್ಸವದ ಧರ್ಮ ಸಮಾರಂಭದಲ್ಲಿ ತುಲಾಭಾರ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಸಮಾಜಕ್ಕೆ ನಿಜಗುಣ ಶಿವಯೋಗಿಗಳಂತಹ ಸತ್ಪುರುಷರ ಅಗತ್ಯವಿದೆ. ಶಿಕ್ಷಣದ ಮೂಲಕ ಜ್ಞಾನ, ದೀಕ್ಷೆಯ ಮೂಲಕ ಆಧ್ಯಾತ್ಮಿಕ ಬೆಳಕು ಹಾಗೂ ಅನುಗ್ರಹದ ಮೂಲಕ ಮೋಕ್ಷದ ಮಾರ್ಗವನ್ನು ತೋರಿಸುವ ಗುರುಸಾನ್ನಿಧ್ಯ ಪಡೆದ ಭಕ್ತರು ನಿಜಕ್ಕೂ ಧನ್ಯರು ಎಂದರು.
ಶ್ರೀಮಠದ ಪೀಠಾಧಿಪತಿ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿ, ಸುಮಾರು 48 ವರ್ಷಗಳ ಹಿಂದೆ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಂದ ಪಡೆದ ಶಿವದೀಕ್ಷೆಯೇ ನನ್ನ ಆಧ್ಯಾತ್ಮಿಕ ಬದುಕಿನ ಅಡಿಪಾಯವಾಗಿದೆ. ಗುರುಗಳು ಕೇವಲ ಮಂತ್ರವನ್ನಲ್ಲ, ಬದುಕಿನ ಮಾರ್ಗವನ್ನೂ ತೋರಿಸಿದರು. ಅವರ ಅನುಗ್ರಹದಿಂದಲೇ ಇಂದು ಧರ್ಮ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ನರಸೀಪುರ ಅಂಬಿಗರ ಚೌಡಯ್ಯನಪೀಠದ ಶ್ರೀ ಜಗದ್ಗುರು ಶಾಂತಭೀಷ್ಮ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಂಸಭಾವಿ, ಗೋಲಗೇರಿ, ಅಗಡಿ, ಶಿಗ್ಗಾಂವಿ, ಹೂವಿನಶಿಗ್ಲಿ, ಗುಡ್ಡದ ಆನ್ವೇರಿ, ಸವಣೂರು ಹಾಗೂ ಬಂಕಾಪೂರದ ವಿವಿಧ ಮಠಾಧೀಶರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ವೇ.ಮೂ. ಮಲ್ಲಿಕಾರ್ಜುನಯ್ಯ ಆರಾಧ್ಯಮಠ ಹಾಗೂ ವೇ.ಮೂ. ಪ್ರಭುಲಿಂಗಯ್ಯ ಆರಾಧ್ಯಮಠ ಅವರಿಂದ ವಿವಿಧ ಧಾರ್ವಿುಕ ಕೈಂಕರ್ಯ ಜರುಗಿತು. ಪ್ರಾಚಾರ್ಯ ವೀರೇಶ ಹಿತ್ತಲಮನಿ ಕಾರ್ಯಕ್ರಮ ನಿರ್ವಹಿಸಿದರು.
ತುಲಾಭಾರ ಸೇವೆ ದೇಹದ ತೂಕದ ಅಳತೆಯಲ್ಲ; ಅದು ಗುರುವಿನ ಮೇಲಿನ ಪ್ರೀತಿ, ನಿಷ್ಠೆ ಹಾಗೂ ಸಮರ್ಪಣೆಯ ಭಾವದ ಅಭಿವ್ಯಕ್ತಿ. ನನ್ನ ಆರಾಧ್ಯ ಗುರುಗಳಾದ ಲಿಂ. ರುದ್ರಮುನಿ ಮಹಾಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಈ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಜೀವನದ ಪರಮ ಭಾಗ್ಯವಾಗಿದೆ.
— | ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ