ಒಡಹುಟ್ಟಿದ ತಮ್ಮನೇ ಬರ್ಬರವಾಗಿ ಕೊಚ್ಚಿ ಕೊಲೆಗೈದ ಅಕ್ಕ
- ಅನೈತಿಕ ಸಂಬಂಧ ಹಿನ್ನೆಲೆ
- ಹತ್ಯೆ ಮಾಡಿ ಶರಣಾದ ಆರೋಪಿ
ಶಿಗ್ಗಾಂವಿ: ಅಂಗನವಾಡಿಯಲ್ಲಿ ಸಹಾಯಕಿ(ಆಯಾ)ಯಾಗಿ ಕೆಲಸ ಮಾಡುತ್ತಿದ್ದ ಅಕ್ಕನನ್ನು ಒಡಹುಟ್ಟಿದ ತಮ್ಮನೇ ಬರ್ಬರವಾಗಿ ಕೊಚ್ಚಿ ಕೊಲೆಗೈದ (Murder) ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ ಗುಡ್ಡದ ಓಣಿಯ ಅಂಗನವಾಡಿ ಕೇಂದ್ರ ನಂ. 3ರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ಸುಮಾ ಶಿವಶಂಕರ ವನಹಳ್ಳಿ (29) ಕೊಲೆಯಾದ ಮಹಿಳೆ. ತಮ್ಮ ಸಂಜು ಹರಿವಾಳ ಹತ್ಯೆಗೈದ ಆರೋಪಿ. ಈತ ಮೂಲತಃ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದವನು.
ಸುಮಾ ಎಂದಿನಂತೆ ಸೋಮವಾರ ಅಂಗನವಾಡಿಗೆ ಬಂದು ಕೆಲಸ ಮಾಡುತ್ತಿದ್ದಳು. ಈ ವೇಳೆ ಅಂಗನವಾಡಿಗೆ ನುಗ್ಗಿದ ಸಂಜು ಹರಿವಾಳ ಅಕ್ಕ ಸುಮಾಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಸುಮಾ ಅನೈತಿಕ ಸಂಬಂಧ ಹೊಂದಿದ್ದಳು. ಹಲವಾರು ಬಾರಿ ಬುದ್ಧಿ ಹೇಳಿದರೂ ತಿದ್ದಿಕೊಳ್ಳದಿರುವುದರಿಂದ ಬೇಸತ್ತು ಕೊಲೆ ಮಾಡಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ. ಶಿಗ್ಗಾಂವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಯಶೋಧಾ ವಂಟಗೋಡಿ ಅವರು ಪರಿಶೀಲಿಸಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಶಿಗ್ಗಾಂವಿ ಪಟ್ಟಣದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದ ಗುತ್ತಿಗೆದಾರನ ಕೊಲೆ ಪ್ರಕರಣ ಮಾಸುವ ಮುನ್ನವೇ ಸೋಮವಾರ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.