ರೈತರು ಜಮೀನಿನಲ್ಲಿನ ತೇಗಿನ (teak tree) ಮರಗಳ ಕಟಾವಿಗೆ ಅನುಮತಿ ನಿಯಮಗಳನ್ನು ಸರಳಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. 
ಹಾವೇರಿ

teak tree ತೇಗಿನ ಮರ ಕಟಾವು ನಿಯಮ ಸರಳಗೊಳಿಸಿ

ಮಂಜುನಾಥ ಕೆಂಪಸಣ್ಣವರ
ಹಾನಗಲ್ಲ: ರೈತರು ಜಮೀನಿನಲ್ಲಿನ ತೇಗಿನ (ಸಾಗವಾನಿ) teak tree ಮರಗಳ ಕಟಾವಿಗೆ ಅನುಮತಿ ನಿಯಮಗಳನ್ನು ಸರಳಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಯಾವುದೋ ಕಾಲದಲ್ಲಿ ರೂಪಿಸಿದ ಕಾನೂನುಗಳು ಇಂದು ಅನ್ವಯವಾಗುವುದಿಲ್ಲ. ಬದಲಾದ ಕಾಲಕ್ಕೆ ರೈತರಿಗೆ ಸಹಕಾರಿಯಾಗುವ ಕಾನೂನುಗಳನ್ನು ರೂಪಿಸಿ ಕೃಷಿ ಜಮೀನಿನಲ್ಲಿನ ಮರಗಳ ಕಟಾವಿಗೆ ಅನುಕೂಲ ಮಾಡಿಕೊಡಬೇಕು. ಅನಗತ್ಯವಾಗಿ ರೈತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನಡುವೆ ಸಂಘರ್ಷಕ್ಕೆ ಅವಕಾಶ ನೀಡಬಾರದು.
ಅನಿವಾರ್ಯ ಸಂದರ್ಭದಲ್ಲಿ ಕಂದಾಯ ಇಲಾಖೆ ಮಾಹಿತಿ ಹಾಗೂ ಪರವಾನಗಿ ಪಡೆಯಲಿ. ಆದರೆ, ಅನಗತ್ಯವಾಗಿ ಎಲ್ಲ ಪ್ರಕರಣಗಳಲ್ಲಿ ಕಂದಾಯ ಇಲಾಖೆ ಅನುಮತಿಗೆ ಒಳಪಡಿಸಿ ರೈತರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿರುವ ಕಾನೂನು ಬದಲಾಯಿಸಬೇಕು. ಮಹಾರಾಷ್ಟ್ರದಲ್ಲಿ ಒಂದೇ ವಾರದಲ್ಲಿ ಮರಗಳ ಕಟಾವಿಗೆ ಪರವಾನಗಿ ದೊರೆಯುತ್ತಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೂ ಕಾನೂನು ಜಾರಿಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹೊಲಗಳ ಬದುಗಳಲ್ಲಿ ಗಿಡ ಬೆಳೆಸುವಂತೆ ಸರ್ಕಾರವೇ ಹೇಳುತ್ತದೆ. ಆದರೆ, ರೈತರಿಗೆ ಅಗತ್ಯವಿದ್ದಾಗ ಅವುಗಳನ್ನು ಕಟಾವು ಮಾಡಿಕೊಳ್ಳಲು ಹತ್ತಾರು ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿದೆ. ಹೀಗಾದರೆ ರೈತರು ಗಿಡಗಳನ್ನು ಬೆಳೆಸುವ ಕ್ರಮಗಳಿಂದ ಹೊರಗುಳಿಯುತ್ತಾರೆ. ತಾಲೂಕಿನಲ್ಲಿ ಜಮೀನಿನಲ್ಲಿ ಗಿಡಗಳ ಕಟಾವಿಗೆ ಅನುಮತಿ ಪಡೆಯಲಾಗದೇ ಕೃಷಿ ಭೂಮಿಯೂ ಹಾಳಾಗುತ್ತಿದೆ. ಸರ್ಕಾರ ಶೀಘ್ರ ಈ ನಿಯಮ ಬದಲಾಯಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೋತಂಬರಿ, ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಷಣ್ಮುಖಪ್ಪ ಅಂದಲಗಿ, ಅಬ್ದುಲ್‌ಖಾದರ ಮುಲ್ಲಾ ಮೊದಲಾದವರು ಇದ್ದರು.