ಬ್ಯಾಡಗಿಯಲ್ಲಿ ಜರುಗಿದ ಜಂಗಮವಟುಗಳ ಶಿವದೀಕ್ಷಾ ಕಾರ್ಯಕ್ರಮದಲ್ಲಿ ದಿಂಡದಹಳ್ಳಿ ಪಂಚಮಠಾಧೀಶ ಷ.ಬ್ರ.ಪಶುಪತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಂಚಾಚಾರ್ಯ ಯುವವೇದಿಕೆ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ವರ್ತಕ ಮೃತ್ಯುಂಜಯ್ಯ ಹಿರೇಮಠ, ಗಿರೀಶ ಇಂಡಿಮಠ, ಕೆ.ಸಿ.ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ, ವಿಜಯ ಕುದರಿಹಾಳಮಠ, ಶೇಖರಗೌಡ್ರ ಕರೇಗೌಡ್ರ ಇದ್ದರು.  
ಹಾವೇರಿ

ವೀರಶೈವ ಲಿಂಗಾಯತರಿಗೆ ಲಿಂಗಧಾರಣೆ ಶ್ರೇಷ್ಠ

ಮಂಜುನಾಥ ಗದಗಿನ
ಬ್ಯಾಡಗಿ: ವೀರಶೈವ ಲಿಂಗಾಯತರಿಗೆ ಲಿಂಗಧಾರಣೆ ಶ್ರೇಷ್ಠವಾಗಿದೆ. ಜಂಗಮವಟುಗಳು ಕಡ್ಡಾಯವಾಗಿ ಶಿವದೀಕ್ಷೆ (ಅಯ್ಯಚಾರ) ಪಡೆಯುವ ಪರಂಪರೆ ಸನಾತನ ಕಾಲದಿಂದಲೂ ನಡೆದುಬಂದಿದ್ದು, ಆಚಾರ-ವಿಚಾರ ತಪ್ಪದಂತೆ ಎಚ್ಚರಿಕೆ ವಹಿಸಿ ಎಂದು ದಿಂಡದಹಳ್ಳಿ ಪಂಚಮಠಾಧೀಶ ಷ.ಬ್ರ.ಪಶುಪತಿ ಶಿವಾಚಾರ್ಯರು ಕರೆ ನೀಡಿದರು.
ಪಟ್ಟಣದ ರೇಣುಕಮಂದಿರ ಹಾಗೂ ಸಂಗಮೇಶ್ವರ ದೇವಸ್ಥಾನಗಳ ಸಭಾಭವನದಲ್ಲಿ ಪಂಚಾಚಾರ್ಯ ಯುವವೇದಿಕೆ ಹಾಗೂ ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಬುಧವಾರ ಜರುಗಿದ 34 ಜಂಗಮ ವಟುಗಳ ಶಿವದೀಕ್ಷಾ (ಅಯ್ಯಚಾರ) ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಎಲ್ಲ ಜಂಗಮರು ಸಂಪ್ರದಾಯದಂತೆ ಅಯ್ಯಚಾರ ದೀಕ್ಷೆ ಪಡೆದುಕೊಂಡು ಧರ್ಮದ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕಿದೆ. ಗುರುವಂಶಸ್ಥರಾದ ಜಂಗಮರನ್ನು ಭಕ್ತಿ ಭಾವನೆಗಳಿಂದ ಕಾಣುತ್ತಿರುವ ಸಮಾಜದಲ್ಲಿ ಜಂಗಮ ಕುಲಬಾಂಧವರು ಆಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಟುಗಳಿಗೆ ಪಾಲಕರು, ಹಿರಿಯರು ಆಗಾಗ ಪಾರಂಪರಿಕೆ ಪದ್ದತಿಗಳ ಕುರಿತು ತಿಳಿಹೇಳುವ ಮೂಲಕ ಧರ್ಮಪಾಲನೆ ಅನುಸರಿಸಬೇಕಿದೆ ಎಂದರು.
ರಾಣೆಬೆನ್ನೂರು ಶನಿಶ್ವರ ಹಿರೇಮಠದ ಷ.ಬ್ರ. ಶಿವಯೋಗಿ ಶಿವಾಚಾರ್ಯರು ಮಾತನಾಡಿ, ವೀರಶೈವ ಸಿದ್ಧಾಂತ ಶಿಖಾಮಣಿಯಲ್ಲಿ ಜೀವನದ ಎಲ್ಲ ಘಟನೆಗಳ ಕುರಿತು ಪ್ರಸ್ತಾಪಿಸಲಾಗಿದೆ. ನಾವು ಯಾವುದನ್ನು ಮಾಡಬಾರದು, ಯಾವುದು ಅನುಸರಿಸಬೇಕು. ತಪ್ಪಿದರೆ ಭವಿಷ್ಯದಲ್ಲಿ ನಮಗೆ ಎದುರಾಗುವ ಆಪತ್ತುಗಳೇನು? ಧರ್ಮ, ಅಧರ್ಮದ ಜೀವನ ಕುರಿತು ಪೂರ್ಣಪ್ರಮಾಣದಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿಕೊಟ್ಟುಕೊಂಡು ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.
ಬೆಳಗ್ಗೆ 5 ಗಂಟೆಯ ಬ್ರಾಹ್ಮೀಮಹೂರ್ತದಲ್ಲಿ ವೇ.ರಾಚಯ್ಯನವರ ಓದಿಸೋಮಠ, ವೀರಯ್ಯ ಹಿರೇಮಠ, ಚನ್ನಬಸಯ್ಯ ಹಿರೇಮಠ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಶಿವದೀಕ್ಷೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಸಾಯಿಮಂದಿರದ ಧರ್ಮಾಧಿಕಾರಿ ವೇ.ಮಂಜಯ್ಯಸ್ವಾಮಿಗಳು ಹಿರೇಮಠ, ಪಂಚಾಚಾರ್ಯ ಯುವವೇದಿಕೆ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ವರ್ತಕ ಮೃತ್ಯುಂಜಯ್ಯ ಹಿರೇಮಠ, ಗಿರೀಶ ಇಂಡಿಮಠ, ಕೆ.ಸಿ.ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ, ವಿಜಯ ಕುದರಿಹಾಳಮಠ, ಶೇಖರಗೌಡ್ರ ಕರೇಗೌಡ್ರ ಇತರರಿದ್ದರು.