ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಾನುಭವಿಗಳಿಗೆ ಶಾಸಕ ಯಾಸೀರಖಾನ್ ಪಠಾಣ ಹಕ್ಕು ಪತ್ರಗಳನ್ನು ವಿತರಿಸಿದರು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಇತರರಿದ್ದರು. 
ಹಾವೇರಿ

ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಲ್ಲ, ಜನಸೇವೆ ಮಾಡಿ mla pathan

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಾಸೀರಖಾನ್ ಪಠಾಣ ಅಭಿಮತ
  • ಹಕ್ಕು ಪತ್ರ ವಿತರಣೆ ಕಾರ್ಯಕ್ರಮ
ಶಿಗ್ಗಾಂವಿ: ರಾಜಕಾರಣಿಗಳಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ, ಅಧಿಕಾರ ಕೊಟ್ಟಾಗ ಜನಸೇವೆ ಮಾಡಿದರೆ ಮಾತ್ರ ಜನಮಾನಸದಲ್ಲಿ ಸದಾಕಾಲ ಉಳಿಯಲು ಸಾಧ್ಯ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.
 ತಾಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 126 ಲಾನುಭವಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು. 
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಆಶಯದಂತೆ ಶಿಗ್ಗಾಂವಿ, ಸವಣೂರ ತಾಲೂಕಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡ ಬಡವರಿಗೆ ಹಕ್ಕು ಪತ್ರಗಳನ್ನು ಹಂತ ಹಂತವಾಗಿ ಕೊಡಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಎರಡೂ ತಾಲೂಕಿನಲ್ಲಿರುವ ಎಲ್ಲ ಬಡವರಿಗೂ ಮನೆಗಳ ಹಕ್ಕು ಪತ್ರಗಳನ್ನು ವಿತರಿಸುವ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಬಡವರಿಗೆ ಎರಡು ಲಕ್ಷ ಮನೆಗಳನ್ನು ಹಂಚಿಕೆ ಮಾಡಿದ್ದು, ಅದರಲ್ಲಿ ಶಿಗ್ಗಾಂವಿ, ಸವಣೂರ ತಾಲೂಕಿಗೆ ಆರು ಸಾವಿರ ಮನೆಗಳನ್ನು ಕೊಡುವ ಭರವಸೆ ಕೊಟ್ಟಿದ್ದಾರೆ. 
ಎರಡೂ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ಕನಿಷ್ಠ ನೂರು ಮನೆಗಳನ್ನು ಕೊಡುವ ಮೂಲಕ ಗುಡಿಸಲಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸುಸಜ್ಜಿತ ಮನೆ ಕಟ್ಟಿಕೊಳ್ಳಲು ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ ಎಂದರು.
ಹಿಂದೆ ಈ ಕ್ಷೇತ್ರವನ್ನು ಆಳಿದವರು ರಾಜಕೀಯವಾಗಿ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. 
ಶಾಸಕನಾಗಿ ಕೇವಲ 16 ತಿಂಗಳಲ್ಲಿ 14 ಸಾವಿರ ಕೋಟಿ ರೂ. ಅನುದಾನ ತರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. 
ಜಕ್ಕನಕಟ್ಟಿ ಸೇರಿದಂತೆ ಕೋಣನಕೇರಿ ಗ್ರಾಪಂ ವ್ಯಾಪ್ತಿಯೊಂದರಲ್ಲಿ 500 ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. 
ನಾನು ಗುರಿಯಿಟ್ಟುಕೊಂಡಂತೆ 20 ಸಾವಿರ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿಯೇ ಜನರ ಬಳಿ ಮುಂದಿನ ಚುನಾವಣೆಯಲ್ಲಿ ಮತ ಕೇಳುತ್ತೇನೆ ಎಂದರು. 
ಹಕ್ಕು ಪತ್ರಗಳ ವಿತರಣೆ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರು ಬೋಗಸ್ ಬಿಳಿ ಹಾಳೆ ಎಂದು ಟೀಕೆ ಮಾಡುತ್ತಿದ್ದಾರೆ. 
ಆದರೆ, ಜನರು ಅವರಿಗೆ ಅಧಿಕಾರ ಕೊಟ್ಟ ಸಂದರ್ಭದಲ್ಲಿ ಅದೇ ಬಿಳಿ ಹಾಳೆಯನ್ನು ಕೊಡಲಾಗದವರಿಗೆ, ಕಾಂಗ್ರೆಸ್ ಸರ್ಕಾರ ಮಾಡುವ ಇಂತಹ ಬಡವರ ಕಾರ್ಯಕ್ರಮಗಳನ್ನು ಟೀಕಿಸುವ ನೈತಿಕತೆ ಇಲ್ಲ. 
ತಾಯಿ ಹೃದಯ ಇಲ್ಲದಂತವರು ಮಾತ್ರ ಇಂತಹ ಟೀಕೆಗಳನ್ನು ಮಾಡಲು ಸಾಧ್ಯ ಎಂದು ಶಾಸಕ ಪಠಾಣ ತಿಳಿಸಿದರು. 
ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಲೂಕಾಡಳಿತದ ಅಧಿಕಾರಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮದ ಮುಖಂಡರಿದ್ದರು.