ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಉರ್ದು ಶಾಲೆ ಗೇಟ್ಗೆ ಬೀಗ ಹಾಕಿದ್ದರಿಂದ ಹೊರಗಡೆ ಕುಳಿತಿದ್ದ ಮಕ್ಕಳು.
ಬ್ಯಾಡಗಿ: ಶಾಲೆಗೆ ದಾನ ನೀಡಿದ್ದಕ್ಕಿಂತಲೂ ಹೆಚ್ಚು ಜಾಗ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಮೂಲ ಮಾಲೀಕರು ಶಾಲೆಯ ಗೇಟ್ಗೆ ಬೀಗ (School gate locked)ಹಾಕಿದ ಘಟನೆ ತಾಲೂಕಿನ ಮಲ್ಲೂರು ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಘಟನೆ ಜರುಗಿತು.
ತಾಲೂಕಿನ ಮಲ್ಲೂರು ಗ್ರಾಮದ ಸರ್ವೆ ನಂ. 111/1ರಲ್ಲಿ 1.02 ಗುಂಟೆ ಜಾಗ ನಮಗೆ ಸೇರಿದ್ದು, ಈ ಪೈಕಿ ಅ ಖರಾಬನ 15 ಗುಂಟೆ ಜಾಗದಲ್ಲಿ 8 ಗುಂಟೆ ಜಾಗವನ್ನು ನಮ್ಮ ತಂದೆ ಶಂಕ್ರಪ್ಪ ಕುಲಕರ್ಣಿ ಅವರು ಶಾಲೆಗೆ ನೀಡಿದ್ದರು. ಕೊಠಡಿ ನಿರ್ವಿುಸುವ ವೇಳೆ ಹೆಚ್ಚು ಬಳಸಿಕೊಳ್ಳುವ ಜತೆಗೆ ಖರಾಬ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕಟ್ಟಡ ನಿರ್ವಿುಸಲಾಗಿದೆ. ಯಾವುದೇ ಕಾರಣಕ್ಕೂ 8 ಗುಂಟೆ ಜಾಗ ಹೊರತುಪಡಿಸಿ, ಉಳಿದ ಜಾಗ ನೀಡುವುದಿಲ್ಲ. ಖರಾಬು ಜಾಗವನ್ನು ಅವರು ಶಾಲೆಗೆ ಬಳಕೆ ಮಾಡಿಕೊಳ್ಳಲಿ ಎಂದು ಮಾಲೀಕ ಈರಪ್ಪ ಕುಲಕರ್ಣಿ ಅವರು ಗೇಟ್ಗೆ ಬೀಗ ಹಾಕಿದ್ದರು.
ಶಾಲಾ ಗೇಟ್ಗೆ ಬೀಗ ಹಾಕಿದ ಬಳಿಕ ಮಕ್ಕಳು ಬಿಸಿಲಿನಲ್ಲಿ ಕುಳಿತಿರುವ ಸುದ್ದಿ ತಿಳಿದು ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಸ್ಥಳಕ್ಕೆ ಧಾವಿಸಿದರು. 2 ತಾಸುಗಳ ಬಳಿಕ ಮಾಲೀಕರನ್ನು ಮನವೊಲಿಸಿ ಗೇಟ್ ತೆರೆಸುವ ಮೂಲಕ ಪಾಠ-ಪ್ರವಚನಕ್ಕೆ ಅನುಕೂಲ ಮಾಡಿಕೊಡಲಾಯಿತು. ಅನಿವಾರ್ಯವಾಗಿ ಶಿಕ್ಷಕರು, ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದರು.
ಘಟನೆಗೆ ಸಂಬಂಧಿಸಿದಂತೆ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಾಣುತ್ತಿದೆ. ಜಾಗ ಶಿಕ್ಷಣ ಇಲಾಖೆ ಹೆಸರಲ್ಲಿ ನೋಂದಣಿ ಆಗದಿದ್ದರೂ ಅನಧಿಕೃತ ಕಟ್ಟಡ ನಿರ್ವಿುಸಲಾಗಿದೆ ಎನ್ನುವ ಪ್ರಶ್ನೆ ಈಗ ದೊಡ್ಡದಾಗಿ ಉದ್ಭವಿಸಿದೆ.
ನಮ್ಮ ತಂದೆಯವರು ಶಾಲೆ ಕಟ್ಟಡ ನಿರ್ವಿುಸಲು 8 ಗುಂಟೆ ಖರಾಬ್ ಜಾಗ ಮಾತ್ರ ನೀಡಿದ್ದಾರೆ. ಆದರೆ ಉಳಿದ ಜಾಗವನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಬೇಸರ ತಂದಿದೆ. ಯಾವುದೇ ಕಾರಣಕ್ಕೂ ಉಳಿದ ಭೂಮಿ ನಾವು ಬಿಟ್ಟುಕೊಡುವುದಿಲ್ಲ. ಸರ್ವೆ ಮಾಡಿ ನಮ್ಮ ಭೂಮಿ ನಮಗೆ ಬಿಡಲಿ. ನಿರ್ಲಕ್ಷಿಸಿದರೆ ಮತ್ತೆ ಹೋರಾಟ ಮಾಡುತ್ತೇವೆ.| ಈರಪ್ಪ ಕುಲಕರ್ಣಿ, ಮಾಲೀಕ.