ಹಾವೇರಿ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ಸಿನಿಮಾ ಟಿಕೆಟ್.
ಹಾವೇರಿ: ಬಡವರಿಗೆ ಉಚಿತವಾಗಿ ಪಡಿತರ ವಿತರಣೆಗಾಗಿ ಆರಂಭಿಸಿರುವ ರಾಜ್ಯದ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಖಾಸಗಿ ಸಂಸ್ಥೆಯ ಸಿನಿಮಾ ಒಂದರ ಪ್ರೀಮಿಯರ್ ಶೋ ಟಿಕೆಟ್‌ಗಳನ್ನು 150 ರೂ.ಗೆ ಮಾರಾಟ ಮಾಡುತ್ತಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.
ಜಿಲ್ಲೆಗೆ 10 ಸಾವಿರದಷ್ಟು ಟಿಕೆಟ್ ಈ ರೀತಿ ಮಾರಾಟಕ್ಕಾಗಿ ಬಂದಿದೆ ಎಂದು ತಿಳಿದುಬಂದಿದೆ.
ನಟ ಕುಮಾರ ಬಂಗಾರಪ್ಪ ಅಭಿನಯದ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಎಂಬ ಶೀರ್ಷಿಕೆಯುಳ್ಳ ಸಿನಿಮಾದ ಟಿಕೆಟ್‌ಗಳನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಜು. 31ರಂದು ಎಲ್ಲ ಜಿಲ್ಲೆಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಿಸಲು ಒಂದು ಟಿಕೆಟ್‌ಗೆ 150 ರೂ. ದರ ನಿಗದಿಪಡಿಸಲಾಗಿದೆ. ಈ ಟಿಕೆಟ್‌ಗಳನ್ನು ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಅಂಗಡಿಗೆ 25ರಿಂದ 100 ಟಿಕೆಟ್‌ವರೆಗೆ ವಿತರಿಸಲಾಗಿದ್ದು, ಅಂಗಡಿಕಾರರು ಇವುಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ.
ಬಡವರಿಗೆ ಉಚಿತ ಅಕ್ಕಿ, ಜೋಳವನ್ನು ಸರಿಯಾಗಿ ಪೂರೈಕೆಯಾಗುವಂತೆ ಮಾಡಿದರೆ ಸಾಕು. ಅದರ ಬದಲು ಖಾಸಗಿ ಸಂಸ್ಥೆಯವರು ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳನ್ನು ಹೀಗೆ ಟಿಕೆಟ್ ಮಾರಾಟಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಕೆಲ ಅಂಗಡಿಯವರು ಟಿಕೆಟ್ ಖರೀದಿಸಿದರೆ ಮಾತ್ರ ರೇಷನ್ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ಉಚಿತವಾಗಿ ಶೋ ಆಯೋಜಿಸಲಿ ಎಂದು ಪಡಿತರ ಗ್ರಾಹಕರು ಸಲಹೆ ನೀಡಿದ್ದಾರೆ
ಒತ್ತಾಯ ಮಾಡುವಂತಿಲ್ಲ..
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಕುರಿತು ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಎಂಬ ಹೆಸರಿನಲ್ಲಿ ಪಡಿತರ ಅಂಗಡಿಗಳ ಕುರಿತು ಸಿನಿಮಾ ಚಿತ್ರೀಕರಿಸಲಾಗಿದೆ. ಸಿನಿಮಾ ತಂಡದವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರ ಅನ್ವಯ ಸೂಕ್ತ ಕ್ರಮ ವಹಿಸಿ ಎಂದು ಆಹಾರ ಇಲಾಖೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ, ಯಾರಿಗೂ ಟಿಕೆಟ್ ಖರೀದಿಸಲೇಬೇಕು ಎಂದು ಒತ್ತಾಯ ಮಾಡುತ್ತಿಲ್ಲ. ಇಷ್ಟಪಟ್ಟವರಿಗೆ ಮಾತ್ರ ಟಿಕೆಟ್ ಕೊಡಲಾಗುತ್ತಿದೆ. ಹಾವೇರಿಯ ಒಂದು ಅಂಗಡಿಯವರು ತಪ್ಪು ಗ್ರಹಿಕೆಯಿಂದ ಕಡ್ಡಾಯವಾಗಿ ಟಿಕೆಟ್ ಖರೀದಿಸಬೇಕು ಎಂದು ಹೇಳಿದ್ದರು. ಅವರು ಸೇರಿದಂತೆ ಎಲ್ಲ ಅಂಗಡಿಗಳಿಗೂ ಮತ್ತೊಮ್ಮೆ ಸೂಚನೆ ನೀಡಲಾಗಿದೆ. ಯಾರಿಗೂ ಒತ್ತಾಯ ಮಾಡದಂತೆ ಸೂಚಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ. ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.