ಹಾವೇರಿ: ಐದು ಜನರ ಗುಂಪೊಂದು ಮನೆಯೊಳಗೆ ನುಗ್ಗಿ ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಹಾಕಿ 4 ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿರುವ ಟನೆ ನಗರದ ಇಜಾರಿಲಕಮಾಪುರ ಬಳಿಯ ಐಡಿಎಸ್ಎಂಟಿ ಕಾಲನಿಯಲ್ಲಿ ನಡೆದಿದೆ.
ಶಾಮಣಗೌಡ ಕುರುವತ್ತಿಗೌಡ ಪಾಟೀಲ ಹಾಗೂ ಚಿತ್ರಾ ಎಂಬ ದಂಪತಿ ಮನೆಯಲ್ಲಿ ದರೋಡೆ ನಡೆದಿರುವುದು.
ಶಾಮಣಗೌಡ ಮನೆ ಬಾಗಿಲು ತೆರೆದುಕೊಂಡು ಇದ್ದ ಸಮಯದಲ್ಲಿ ಒಳಗೆ ನುಗ್ಗಿದ ಖದೀಮರು ಕೂಡುಗೋಲು ತೋರಿಸಿ ಇಬ್ಬರನ್ನು ಬೆದರಿಸಿದ್ದಾರೆ. ನಂತರ ಕಿಟಕಿಗೆ ಹಾಕಿದ್ದ ಪರದೆಯ ದಾರವನ್ನು ಕುಡುಗೋಲಿನಿಂದ ಕತ್ತರಿಸಿ, ಅದೇ ದಾರದಿಂದ ನನ್ನ ಹಾಗೂ ಪತ್ನಿಯ ಕೈಕಾಲುಗಳನ್ನು ಕಟ್ಟಿಹಾಕಿದರು. ಟೇಬಲ್ ಮೇಲಿದ್ದ ಬಟ್ಟೆ ಹರಿದು, ಅದನ್ನು ಇಬ್ಬರ ಬಾಯಿಗೆ ಕಟ್ಟಿ ಹಾಕಿದರು. ಹೀಗಾಗಿ, ಕೂಗಾಡಲು ಆಗಲಿಲ್ಲ. ಕುತ್ತಿಗೆ ಬಳಿ ಕುಡುಗೋಲು ಇಟ್ಟು ಸುಮ್ಮನಿರದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದರು. ಬಳಿಕ ಬೆಡ್ರೂಮ್ನಲ್ಲಿ ಹಣ ಹಾಗೂ ಬೆಳ್ಳಿ ವಸ್ತು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಶಾಮಣಗೌಡ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಹಾವೇರಿ ಜನರಲ್ಲಿ ಮತ್ತೆ ಆತಂಕ...
ಇಲ್ಲಿಯ ಜಯದೇವನಗರದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಕೈಯಲ್ಲಿ ಚಾಕು ಹಿಡಿದು ಮನೆ ಬಾಗಿಲು ಬಡಿದಿದ್ದ ಘಟನೆಯಿಂದ ಸ್ಥಳಿಯರು ಆತಂಕಗೊಂಡಿದ್ದರು. ಈಗ ಹಾವೇರಿಯಲ್ಲಿಯೇ ಮನೆಯೊಂದಕ್ಕೆ ನುಗ್ಗಿ, ವೃದ್ಧ ದಂಪತಿಯ ಕೈಕಾಲು ಕಟ್ಟಿಹಾಕಿ ದರೋಡೆ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಮೇಲಿಂದ ಮೇಲೆ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ವೃದ್ಧ ದಂಪತಿಯನ್ನು ಕಟ್ಟಿಹಾಕಿ ದರೋಡೆ ಮಾಡಿರುವುದು ಜನರಲ್ಲಿ ಭಯ ತರಿಸಿದೆ. ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ತ್ವರಿತವಾಗಿ ಬಂಧಿಸಬೇಕು. ಒಂಟಿ ಮನೆಗಳು ಹಾಗೂ ವೃದ್ಧರು ವಾಸವಿರುವ ಮನೆಗಳ ಬಳಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.