ಹಾಳಾಗಿರುವ ಹಾವೇರಿ-ಹಾನಗಲ್ಲ ಹೆದ್ದಾರಿ ಹದಗೆಟ್ಟಿರುವುದು. 
ಹಾವೇರಿ

ಜೀವಕ್ಕೆ ಕುತ್ತು ತಂದಿವೆ ಗುಂಡಿಗಳು!

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ಹಾನಗಲ್ಲಿನಿಂದ ಹಾವೇರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಅದರೆ, ತಾಲೂಕಿನ ಶೀಗಿಹಳ್ಳಿ ಸಿಂಗಾಪುರ, ಆಡೂರ, ಬಾಳಂಬೀಡ ಬಳಿ ಬಿದ್ದಿರುವ ಗುಂಡಿಗಳಿಂದ ನಿತ್ಯ ಸವಾರರು ಪರದಾಡುವಂತಾಗಿದೆ.
ಹಾವೇರಿಯಿಂದ ಶಿರಶಿ, ಕಾರವಾರ ಮಾರ್ಗದಲ್ಲಿ ಸಂಚರಿಸುವ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿಗಾಗಿ ತೆಗೆದ ಗುಂಡಿಗಳು ತಿಂಗಳು ಕಳೆದರೂ ದುರಸ್ತಿಯಾಗದೆ ಇರುವುದು ಇದೀಗ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿವೆ. ಈ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಹಿಂದೆಯೂ ಈ ರಸ್ತೆ ಅತಿವೃಷ್ಟಿ ಸಂದರ್ಭದಲ್ಲಿ ಕುಸಿತವಾಗಿದ್ದರಿಂದ ಆಗ ಚೌಕಾಕಾರದಲ್ಲಿ ರಸ್ತೆ ಕತ್ತರಿಸಿ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೆ, ಅದೇ ರಸ್ತೆಯ ಡಾಂಬರು ಜರಿದು ಹೋಗಿ ಇಂಥ ಅಪಾಯಕರ ಸ್ಥಿತಿಗೆ ಕಾರಣವಾಗಿದೆ. ಅವೈಜ್ಞಾನಿಕ ಕಾಮಗಾರಿಗಳಿಗೆ ಈ ರಸ್ತೆ ಸಾಕ್ಷಿಯಾಗಿದೆ.
ಅದರಲ್ಲೂ ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಸ್ವಲ್ಪ ಯಾಮಾರಿದ್ರೆ ಅಪಾಯ ಗ್ಯಾರಂಟಿ. ಇನ್ನಾದರೂ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
"

ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಸಮಸ್ತೆ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಇಲ್ಲಿಯವರೆಗೆ ಯಾವುದೇ ಇಲಾಖೆ ಅಧಿಕಾರಿಗಳೂ ಕ್ರಮಕೈಗೊಂಡಿಲ್ಲ. ಈ ರಸ್ತೆ ಮೂಲಕ ಸಂಚರಿಸುವ ಜನಪ್ರತಿನಿಧಿಗಳೂ ಕಂಡೂ ಕಾಣದಂತಿದ್ದಾರೆ. ಈ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಕೈಗೊಳ್ಳಲಾಗುವುದು.