ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡವನಿಗೆ ಚಿಕಿತ್ಸೆ ನೀಡಲಾಯಿತು. 
ಹಾವೇರಿ

bull riding ಹೋರಿ ಓಡಿಸುವ ವಿಚಾರಕ್ಕೆ ಗಲಾಟೆ, 8 ಜನರಿಗೆ ಗಾಯ

ಹಾನಗಲ್ಲ: ಕಾರಹುಣ್ಣಿಮೆ ಅಂಗವಾಗಿ ಹೋರಿ ಓಡಿಸುತ್ತಿದ್ದ (bull riding) ವಿಷಯಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ 8 ಜನ ಗಾಯಗೊಂಡ ಘಟನೆ ತಾಲೂಕಿನ ನರೇಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಘಟನೆಯಲ್ಲಿ ಶಿವರಾಜ ಕುರುಬರ, ನಾಗಪ್ಪ ಹನುಮಂತಪ್ಪ ಕುರುಬರ, ಮಲ್ಲಪ್ಪ ರಾಯಪ್ಪ ಕೊಡಸಂಗಿ, ನಿಂಗರಾಜ ಮಹಾಂತೇಶ ಕುರುಬರ, ಜಯಪ್ಪ ಸಂಗಪ್ಪ ಕುರುಬರ, ಲೋಹಿತ ರೇವಣಪ್ಪ ಕುರುಬರ, ಬಾಷಾಸಾಬ್ ಗೌಂಡಿ, ಖಾಜಾ ಗೌಂಡಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವರಾಜ ಕುರುಬರ, ಜಯಪ್ಪ ಕುರುಬರ ಹಾಗೂ ಲೋಹಿತ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸ್​ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಕಾರಹುಣ್ಣಿಮೆ ಅಂಗವಾಗಿ ಸಂಪ್ರದಾಯದಂತೆ ಗ್ರಾಮದ ಬೀದಿಯಲ್ಲಿ ರೈತರು ತಮ್ಮ ಎತ್ತುಗಳನ್ನು ಓಡಿಸುತ್ತಿದ್ದರು. ಈ ವಿಚಾರವಾಗಿ ಎರಡು ಕೋಮಿನ ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಒಂದು ಕೋಮಿನ ಇಬ್ಬರು ಇನ್ನೊಂದು ಗುಂಪಿನ ಜನರನ್ನು ಮಾರಕಾಸ್ತ್ರಗಳಿಂದ 6 ಜನರನ್ನು ಗಾಯಗೊಳಿಸಿದ್ದಾರೆ. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ.
ಈ ಘಟನೆಯಿಂದಾಗಿ ನರೇಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ. ಹಾವೇರಿ ಎಸ್​ಪಿ ಯಶೋಧಾ ವಂಟಗೋಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.