ಬ್ಯಾಡಗಿಯ ಶ್ರೀ ಸಾಯಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ತಿಕೋತ್ಸವ ಹಾಗೂ ಧರ್ಮಜಾಗೃತಿ (Religion) ಸಭೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಚಾಲನೆ ನೀಡಿದರು. 
ಹಾವೇರಿ

religion ಧರ್ಮವೇ ಜೀವನದ ಜೀವಾಳ

ಬ್ಯಾಡಗಿ: ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಧರ್ಮವೇ Religion ಜೀವನದ ಜೀವಾಳ. ಮನಕ್ಕೆ ಶಾಂತಿ, ಆತ್ಮಕ್ಕೆ ಆನಂದ ಕೊಡುವುದು ಧರ್ಮ. ಸಕಲ ಧರ್ಮಕ್ಕೂ ದಯವೇ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಿದ್ದ 9ನೇ ವರ್ಷದ ಕಾರ್ತಿಕೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ಮುನ್ನಡೆಯುವ ಛಲ ಬೇಕು. ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆ ಅಗತ್ಯವಾಗಿದೆ. ಅಶಾಂತಿಯಿಂದ ತತ್ತರಿಸುತ್ತಿರುವ ಇಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡು ಒಳ್ಳೆಯ ದಾರಿಯತ್ತ ನಡೆಯಬೇಕು. ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು ಎಂದರು.
ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಮಂಜಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುಡ್ಡದಮಲ್ಲಾಪುರದ ಶ್ರೀ ಮೂಕಪ್ಪ ಶಿವಾಚಾರ್ಯರು, ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಬ್ಯಾಡಗಿ ಚನ್ನಮಲ್ಲಿಕಾರ್ಜುನ ಶ್ರೀಗಳು, ಕೂಡಲದ ಶ್ರೀ ಮಹೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು, ಶ್ರೀ ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ವಿ.ವಿ. ಹಿರೇಮಠ, ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿಗಳು ದಾಸೋಹಮಠ, ರಾಚಯ್ಯಸ್ವಾಮಿಗಳು ಓದಿಸೋಮಠ ಇದ್ದರು.