ರಾಣೆಬೆನ್ನೂರು: ಶಿವನ ಸಾಕಾರ ರೂಪ ಶ್ರೀ ಗುರು. ಗುರು ದರ್ಶನವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ನಿಮಿತ್ತ ಏರ್ಪಡಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜನ ಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮ ಸೃಷ್ಠಿ ಮಾಡಬಲ್ಲ. ವಿಷ್ಣು ಸಂರಕ್ಷಣೆ ಮಾಡಬಲ್ಲ. ಮಹೇಶ್ವರ ದುಷ್ಟ ಶಕ್ತಿ ನಾಶ ಮಾಡಬಲ್ಲ. ಈ ಮೂರು ಗುಣಗಳು ಶ್ರೀ ಗುರುವಿನಲ್ಲಿ ಅಡಕವಾಗಿವೆ. ಶ್ರೀ ಗುರು ಮನಸ್ಸು ಮಾಡಿದರೆ ಹೊಸದನ್ನು ನಿರ್ಮಿಸಬಲ್ಲ ಮತ್ತು ಸಂರಕ್ಷಿಸಬಲ್ಲ. ಗುರುವಿನ ಕೋಪ ತಾಪಕ್ಕೆ ಬಲಿಯಾದರೆ ನಾಶ ನಿಶ್ಚಿತ. ಗುರು ಕಾರುಣ್ಯ ಸಂಪ್ರಾಪ್ತಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಗುರು ನರನೆಂದವಗೆ, ಲಿಂಗ ಶಿಲೆ ಎಂದವನಿಗೆ, ಕರುಣ ಪ್ರಸಾದ ಎಂಜಲು ಎನ್ನುವವರಿಗೆ ನಾಯಕ ನರಕ ತಪ್ಪದೆಂದು ಸರ್ವಜ್ಞ ಕವಿ ಎಲ್ಲರನ್ನು ಎಚ್ಚರಿಸಿದ್ದಾನೆ. ಅರೇಮಲ್ಲಾಪುರ ಗ್ರಾಮ ಚಿಕ್ಕದಾದರೂ ಇಲ್ಲಿರುವ ಜನರ ಭಕ್ತಿ ಶ್ರದ್ಧೆ ಅಪಾರ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರ ಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ಅರೇಮಲ್ಲಾಪುರ ಗ್ರಾಮದಲ್ಲಿ ನೆಲೆಗೊಂಡಿರುವು ತಮ್ಮೆಲ್ಲರ ಸೌಭಾಗ್ಯವೆಂದು ಹರುಷ ವ್ಯಕ್ತಪಡಿಸಿದರು.
ಉಜ್ಜಯಿನಿ ಪೀಠದ ಸಿದ್ಧಲಿಂಗ ಜಗದ್ಗುರು, ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರು, ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರು, ಕಾಶಿ ಪೀಠದ ನೂತನ ಡಾ. ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಚ್. ಶಿವಶಂಕರ, ವಿರೂಪಾಕ್ಷಪ್ಪ ಬಳ್ಳಾರಿ, ಹಿರಿಯ ವಕೀಲ ಪಿ.ಆರ್. ಕುಪ್ಪೇಲೂರ ಹಾಗೂ ಗ್ರಾಮದ ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು.