ಬಂಕಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರು ಶನಿವಾರ ಸಭೆ ನಡೆಸಿದರು. ಹನುಮಂತಪ್ಪ ಹುಚ್ಚಣ್ಣನವರ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ ಇತರರಿದ್ದರು. maize purchase
ಶಿಗ್ಗಾಂವಿ: ರಾಜ್ಯದಲ್ಲಿ ಸುಮಾರು 53 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಮೆಕ್ಕೆಜೋಳ ಬೆಳೆಯಲಾಗಿದ್ದರೂ, 2400 ರೂ. ದರದಂತೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ರಾಜ್ಯ ಸರ್ಕಾರ ಸೂಚಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೂಡಲೇ 3 ಸಾವಿರ ದರ ನಿಗದಿಪಡಿಸಿ, ಎಲ್ಲ ಮೆಕ್ಕೆಜೋಳ (maize purchase) ಖರೀದಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘದ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದ ಅವರು, ಬೆಳೆ ಕಟಾವಿಗೆ ಮೊದಲೇ 3 ಸಾವಿರ ರೂಪಾಯಿ ದರದಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ, ಸರ್ಕಾರ ರೈತರ ನೆರವಿಗೆ ಬಾರದಿರುವುದು ದುರ್ದೈವದ ಸಂಗತಿಯಾಗಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಡಿ. 7ರಿಂದ ಬಂಕಾಪುರ ಟೋಲ್ ಬಳಿ ರಾಜ್ಯ ಹೆದ್ದಾರಿ ತಡೆದು ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಈ ಮೊದಲೇ ಮನವಿ ಮಾಡಿದ್ದರೂ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮುಂಗಾರಿನ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ, ಈವರೆಗೆ ಪರಿಹಾರ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಕೆಲ ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲ ಕೊಡುತ್ತಿಲ್ಲ, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರದ ಮೂಲಕ 3 ಸಾವಿರ ಬೆಲೆಯೊಂದಿಗೆ ಮೆಕ್ಕೆಜೋಳ ಖರೀದಿಸಬೇಕು ಎಂದರು.
ರೈತ ಸಂಘದ ಮುಖಂಡರಾದ ಟಿ.ಡಿ. ಬಸವರಾಜ, ರುದ್ರಪ್ಪ ಬಳಿಗಾರ, ಈರಪ್ಪ ಮುದಿಯಪ್ಪನವರ, ಬಸಯ್ಯ ಹಿರೇಮಠ, ವೀರಭದ್ರಪ್ಪ ಅಗಡಿ, ಮಂಜಣ್ಣ ಕಂಕನವಾಡ, ಚಂದ್ರಣ್ಣ ಬಾಮೋಜಿ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ, ಹನುಮಂತಪ್ಪ ಹುಚ್ಚಣ್ಣವರ, ರುದ್ರಪ್ಪ ಬಳಿಗಾರ, ಚನ್ನಬಸಪ್ಪ ಹಾವಣಗಿ, ನಾಗರಾಜ ಕುರುಬರ, ದಯಾನಂದ ಮೆಣಸಿನಕಾಯಿ, ಮಾರ್ತಾಂಡಪ್ಪ ನೆಗಳೂರು, ಶಿವಾನಂದ ಜಡಿಮಠ ಇತರರಿದ್ದರು.