ಪ್ರತಿಭಟನೆ  
ಹಾವೇರಿ

ಬೆಳಗಾವಿಯಂತೆ ನಮಗೂ ಕೊಡಿ; ಅರುಣಕುಮಾರ ನೇತೃತ್ವದಲ್ಲಿ ಹೋರಾಟ

ಕರಿಯಪ್ಪ ಅರಳಿಕಟ್ಟಿ
ರಾಣೆಬೆನ್ನೂರ: ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಹಾವೇರಿ ಜಿಲ್ಲೆಯ ರೈತರಿಗೆ ಬೆಳಗಾವಿ ಜಿಲ್ಲೆಯ ಮಾದರಿಯಲ್ಲಿ ಪ್ರತಿ ಟನ್​ ಕಬ್ಬಿಗೆ 3500 ರೂ. ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್​ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ರೈತರು ಬೃಹತ್​ ಪ್ರತಿಭಟನೆ ನಡೆಸಿದರು.
ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಎತ್ತಿನ ಚಕ್ಕಡಿ ಮೂಲಕ ಪ್ರತಿಭಟನೆ ಮೆರವಣಿಗೆ ಆರಂಭಿಸಿ ಬಸ್​ ನಿಲ್ದಾಣ ವೃತ್ತ, ಹಲಗೇರಿ ವೃತ್ತ, ಕುರುಬಗೇರಿ ವೃತ್ತದ ಮೂಲಕ ತಹಸೀಲ್ದಾರ್​ ಕಚೇರಿವರೆಗೂ ಸಾಗಿ ಬಂದರು. ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲ. ಬೆಳೆಹಾನಿಗೆ ಪರಿಹಾರವಿಲ್ಲ. ಹೀಗಾಗಿ ರೈತರು ಬೇಸತ್ತು ಹೋಗಿದ್ದು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ರೈತರಿಗೆ ನೆರವಿಗೆ ಬರಬೇಕು. ಬೆಳೆವಿಮೆ, ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಬೇಕು. ಜತೆಗೆ ಪ್ರತಿ 1 ಟನ್​ ಕಬ್ಬಿಗೆ 3500 ರೂ. ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್​ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ನಗರಸಭೆ ಸದಸ್ಯರಾದ ನಿಂಗರಾಜ ಕೋಡಿಹಳ್ಳಿ, ಮಲ್ಲಣ್ಣ ಅಂಗಡಿ, ಬಸವರಾಜ ಹುಲ್ಲತ್ತಿ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ಎ.ಬಿ. ಪಾಟೀಲ, ಪ್ರಕಾಶ ಪೂಜಾರ, ಸಿದ್ದಪ್ಪ ಚಿಕ್ಕಬಿದರಿ, ಕೆ. ಶಿವಲಿಂಗಪ್ಪ, ಭಾರತಿ ಬಂಬಗಿ, ಮೌನೇಶ ತಳವಾರ, ಹನುಮಂತಪ್ಪ ದೇವರಗುಡ್ಡ, ಹುಚ್ಚಪ್ಪ ಮೇಡ್ಲೇರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.