ಸವಣೂರು ಪಟ್ಟಣದ ಹೆಸ್ಕಾಂ ಉಪ ವಿಭಾಗ ಕಚೇರಿಗೆ ರೈತರು ಸೋಮವಾರ ಬೀಗ ಜಡಿದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. 
ಹಾವೇರಿ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ನಿತ್ಯ ೭ ಗಂಟೆ ವಿದ್ಯುತ್ ಸರಬರಾಜಿಗೆ ಒತ್ತಾಯ

ಸವಣೂರು: ವಿವಿಧ ಬೇಡಿಕೆ ಈಡೇರಿಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದರೂ, ಅಽಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಹೆಸ್ಕಾಂ ಇಲಾಖೆ ಉಪವಿಭಾಗ ಕಚೇರಿಗೆ ರೈತರು ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸವಣೂರು ಹದ್ದಿನಲ್ಲಿರುವ ಕೃಷಿ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಪೂರೈಕೆಯಿಲ್ಲದೆ ನಿತ್ಯ ಪರದಾಡುವಂತಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ೭ ತಾಸು ವಿದ್ಯುತ್ ಪೂರೈಸಬೇಕು. ಆದರೆ, ಹೆಸ್ಕಾಂ ಅಽಕಾರಿಗಳು ಹಾಗೂ ಸಿಬ್ಬಂದಿ ಬೇಜಾಬ್ದಾರಿಯಿಂದಾಗಿ ನಿತ್ಯ ೧ ತಾಸು ವಿದ್ಯುತ್ ಸರಬರಾಜು ನೀಡುತ್ತಿಲ್ಲ. ಪ್ರಶ್ನಿಸಿದರೆ ನೆಪ ಹೇಳುತ್ತಾರೆ ಹೊರತು ವಿದ್ಯುತ್ ನೀಡುತ್ತಿಲ್ಲ. ಸ್ಥಳೀಯರೇ ಹೆಸ್ಕಾಂ ಅಧ್ಯಕ್ಷರು ಆಗಿದ್ದರೂ, ಇಲ್ಲಿನ ವಿದ್ಯುತ್ ಸಮಸ್ಯೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲ ಎದುರಿಸಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೀರಿದ್ದರೂ, ವಿದ್ಯುತ್ ಸಮಸ್ಯೆಯಿಂದ ಬೆಳೆ ಉಳಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯ ೭ ಗಂಟೆ ವಿದ್ಯುತ್ ಸರಬರಾಜು ನೀಡಿದಲ್ಲಿ ಕಚೇರಿ ಬೀಗ ತೆಗೆಯಲಾಗುವುದು ಎಂದು ಪಟ್ಟು ಹಿಡಿದರು.

ಹೆಸ್ಕಾ ಇಲಾಖೆ ಜೆಇ ಮುಜಾಮಿನ್ ಶಾಬಾಳ ಮಾತನಾಡಿ, ಒಂದು ವಾರದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಇಂದಿನಿಂದ ಕಾಮಗಾರಿವರೆಗೂ ನಿರಂತರ ೭ ಗಂಟೆ ವಿದ್ಯುತ್ ಸರಬರಾಜುಗೊಳಿಸಲಾಗುವುದು ಎಂದು ಸಮಜಾಯಿಸಿ ನೀಡಿದರು. ಮತ್ತಷ್ಟು ಆಕ್ರೋಶಗೊಂಡ ರೈತರು, ನೀವು ನಿರಂತರ ೭ ತಾಸು ವಿದ್ಯುತ್ ನೀಡುವುದೇ ನಿಜವಾಗಿದ್ದರೆ, ಬಡ ರೈತರನ್ನು ಸತಾಯಿಸುತ್ತಿದ್ದೀರಿ ಎಂದರು.

ಪರಿಸ್ಥಿತಿ ಅರಿತ ಹೆಸ್ಕಾ ಇಲಾಖೆ ಜೆಇ ಶಾಬಾಳ, ದಿನಕ್ಕೆ ೭ ತಾಸು ವಿದ್ಯುತ್ ಸರಬರಾಜಿಗೆ ಸೂಕ್ತ ವ್ಯವಸ್ಥೆ ಕೈಗೊಂಡು, ರೈತರಿಗೆ ಮಾಹಿತಿ ನೀಡಲಾಗುವುದು ಎಂದರು. ಆಗ ರೈತರು, ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಚ್ಚರಿಸಿ ಪ್ರತಿಭಟನೆ ಹಿಂಪಡೆದು ಬೀಗ ತೆಗೆದರು.

ರೈತರಾದ ಸಿದ್ದಪ್ಪ ನಾರಾಯಣಪುರ, ವಿನಾಯಕ ಕುಲಕರ್ಣಿ, ಕಿರಣ ಗಾಣಿಗೇರ, ಪ್ರವೀಣ ಕಂಬಾಳಿಮಠ, ಬಸನಗೌಡ ಪಾಟೀಲ, ರವಿ ಕಳಕಪ್ಪನವರ, ಶರಣು ಕುಲಕರ್ಣಿ, ವೀರೇಶ ರಾಯನಾಳ, ವಿಷ್ಣು ಸಾರಥರಾಮ, ಬಸವರಾಜ ಮಟಿಗಾರ, ಸಂತೋಷ ಕಳಕಪ್ಪನವರ ಇತರರು ಇದ್ದರು.