ಹಿರೇಕೆರೂರು ಪಟ್ಟಣದಲ್ಲಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಸಮಿತಿಯಿಂದ ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರು: ಕನಿಷ್ಠ ವೇತನ ಪರಿಷ್ಕರಣೆ ಆದೇಶ ಸಮರ್ಪಕ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಸಮಿತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ Protest ನಡೆಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಶೇಖಪ್ಪ ಮುಗಳಿಹಳ್ಳಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲಾ-ಕಾಲೇಜ್, ವಸತಿ ನಿಲಯಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರುಪ್‌ನ ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್‌ಗಳು, ಹೊರಗುತ್ತಿಗೆ ಅತಿಥಿ ಶಿಕ್ಷಕರು ಕಳೆದ 15-20 ವರ್ಷಗಳಿಂದ ಕಡಿಮೆ ಸಂಬಳಕ್ಕೆ, ಯಾವುದೇ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರು, ವಾರ್ಡನ್‌ಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹೊರಗುತ್ತಿಗೆ ಸಿಬ್ಬಂದಿ ನಿರಂತರ ಕಿರುಕುಳ ಹಾಗೂ ಮನಸಿಗೆ ಬಂದ ಹಾಗೆ ಕೆಲಸದಿಂದ ತೆಗೆದು ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು.
ಸುನೀತಾ ಬಡನಾಯಕರ ಮಾತನಾಡಿ, ಮೇ 22, 2026ರಂದು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಪರಿಷ್ಕರಣೆ ಕರಡು ಅಂತಿಮ ಅಧಿಸೂಚನೆ ಹೊರಡಿಸಿದಂತೆ ಕನಿಷ್ಠ ವೇತನ ತಕ್ಷಣ ಜಾರಿ ಮಾಡಬೇಕು. ಕನಿಷ್ಠ ವೇತನ ಮಾಸಿಕ 36 ಸಾವಿರ ರೂ. ಕೊಡಬೇಕು. ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲೇ ಕಾಯಂ ನೇಮಕ ಮಾಡಬೇಕು. ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಎಂ.ರೇಣುಕಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಎಸ್., ಕರಬಸಪ್ಪ ಬಣಕಾರ, ರಮೇಶ ಯಲ್ಲಾಪುರ, ಬಸವರಾಜ ಭೋಗೇರ, ಬಸವಕುಮಾರ ಗುಂಡಗಟ್ಟಿ, ರೇಣುಕಾ ಕರೇಗಾರ, ಮಹಾದೇವಕ್ಕ, ನೇತ್ರಾ, ಇತರರು ಇದ್ದರು.