ಸವಣೂರು ತಾಲೂಕಿನ ಜಲ್ಲಾಪೂರ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ(Protest) ಕೈಗೊಂಡರು. 
ಹಾವೇರಿ

Protest ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ವಿವೇಕಾನಂದ ದಾಸನಕೊಪ್ಪ
ಸವಣೂರು: ಸರ್ಕಾರಿ ಜಮೀನು ಒತ್ತುವರಿ ತೆರವಿಗಾಗಿ ಅಗ್ರಹಿಸಿ ತಾಲೂಕಿನ ಜಲ್ಲಾಪೂರ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಸೋಮವಾರ  ಬೀಗ ಜಡಿದು ಪ್ರತಿಭಟನೆ (Protest) ನಡೆಸಿದರು.
ಜಲ್ಲಾಪುರ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಸರ್ವೇ ನಂ. 86ಕ್ಕೆ ಸಂಬಂಧಿಸಿದ 28 ಗುಂಟೆ ಜಾಗವನ್ನು ಪಂಚಾರಯ್ಯ ಆರಾಧ್ಯಮಠ ಎಂಬುವರು ಅನಧಿಕೃತವಾಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಬಿ.ಎಸ್​. ಶಿಡೇನೂರು ಅವರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.  ಪ್ರತಿಭಟನೆ ತೀವ್ರ ಸ್ವರೂಪ ತಾಳುವುದನ್ನು ಅರಿತು ತಾಪಂ ಇಒ ಅವರು ತಹಸೀಲ್ದಾರ್​ ಹಾಗೂ ಭೂಮಾಪನ ಇಲಾಖಾ ಅಧಿಕಾರಿಗಳೊಂದಿಗೆ ಚಚಿರ್ಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಗ್ರೇಡ್​ 2 ತಹಸೀಲ್ದಾರ್​ ಗಣೇಶ ಸವಣೂರ, ಉಪ ತಹಸೀಲ್ದಾರ್​ ಬಿ.ವೈ. ಬೋಗಾರ, ಭೂಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಪಿಐ ತಿಮ್ಮಣ್ಣ ಚಾಮನೂರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.
ಈ ವೇಳೆ ಗ್ರಾಮಸ್ಥರು, ನಮ್ಮ ಮನವಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಪಟ್ಟು ಹಿಡಿದರು. ನಂತರ ತಾಪಂ ಇಒ ಅವರು 15 ದಿನಗಳ ಒಳಗಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೂ ಒಪ್ಪದ ಗ್ರಾಮಸ್ಥರು, ನಾಳೆಯೇ ನಿವೇಶನ ಹದ್ದುಬಸ್ತ್​ ಮಾಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ತಾವೇ ಕಲ್ಪಿಸುವುದಾಗಿ ತಿಳಿಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅಧಿಕಾರಿಗಳು, ಒತ್ತುವರಿಯಾದ ಸರ್ಕಾರಿ ನಿವೇಶನವನ್ನು ಜೂ. 2ರಂದೇ ಹದ್ದುಬಸ್ತ್​ ಮಾಡಲಾಗುವುದು. ತದ ನಂತರ ಹಂತ-ಹಂತವಾಗಿ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.